Menu

ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿಗೆ ಹೈಕೋರ್ಟ್‌ ಜಾಮೀನು

ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಲಾಗಿದೆ. ಐದು ಲಕ್ಷ ರೂ. ಬಾಂಡ್ ಹಾಗೂ ಶ್ಯೂರಿಟಿ ಒದಗಿಸುವಂತೆ ಕೋರ್ಟ್​ ಆದೇಶಿಸಿದೆ. ವಿನಯ್ ಕುಲಕರ್ಣಿ ದೋಷಿ ಎಂದು ಪ್ರಕಟಿಸಿದ್ದ ತೀರ್ಪಿಗೂ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾ.ಮೊಹಮ್ಮದ್ ನವಾಜ್, ಜಿ.ಬಸವರಾಜ ಅವರಿದ್ದ ಪೀಠವು ಈ ಆದೇಶ ಪ್ರಕಟಿಸಿದೆ.

ವಿನಯ್ ಕುಲಕರ್ಣಿ ಸೇರಿದಂತೆ 10 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮ, ದಿನೇಶ್, ಅಶ್ವತ್ಥ್‌, ಸುನಿಲ್, ನಜೀರ್ ಅಹ್ಮದ್, ಷಾನವಾಜ್, ನೂತನ್, ಹರ್ಷಿತ್, ಚನ್ನಕೇಶವ ಟಿಂಗರಿಕರ್‌ಗೆ ಹೈಕೋರ್ಟ್‌ ಜಾಮೀನು ನೀಡಿದೆ.

೨016ರ ಜೂನ್ 15ರಂದು ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ನಡೆದಿತ್ತು. ಸಿಬಿಐ ಪ್ರಕರಣದ ತನಿಖೆ ನಡೆಸಿದ ಬಳಿಕ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಸಂಚು ಆರೋಪಗಳು ಸಾಬೀತಾಗಿವೆ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ 2026ರ ಏಪ್ರಿಲ್ 17ರಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಏಳು ವರ್ಷ ಜೈಲು ಹಾಗೂ ದಂಡ ವಿಧಿಸಿತ್ತು. ದಂಡದ ಮೊತ್ತದಿಂದ ಸಂತ್ರಸ್ತ ಯೋಗೀಶ್ ಗೌಡ ಅವರ ಮಕ್ಕಳು ಮತ್ತು ಸಹೋದರರಿಗೆ ಒಟ್ಟು 16 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿತ್ತು.

ಶಿಕ್ಷೆ ಪ್ರಕಟವಾದ ಬಳಿಕ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹಗೊಂಡಿತ್ತು. ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದೆ.

ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ದೊರೆತಿರುವ ಬಗ್ಗೆ ಹೋರಾಟಗಾರ ಬಸವರಾಜ್ ಕೊರವರ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು, ತಡೆಯಾಜ್ಞೆ ಸಿಗಬಾರದು , ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ಹೇಳಿದರು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *