ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರಗಳ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಬಂದ್ ಘೋಷಣೆ ಆಗುತ್ತಿದ್ದಂತೆ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ಈ ವಿಚಾರದಲ್ಲಿ ರೈತ ಸಂಘಟನೆಗಳು ಹಾಗೂ ಇತರ ಸಂಘಟನೆಗಳು ಈಗಾಗಲೇ ಪ್ರತಿಭಟನೆ ತೀವ್ರಗೊಳಿಸಿವೆ. ಕನ್ನಡ ಒಕ್ಕೂಟಗಳ ಸಭೆ ನಡೆಸಿದ ಬಳಿಕ ಹೋರಾಟಗಾರ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್ ನಡೆಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಅಂದು ಬೆಳಗ್ಗೆ ಆರರಿಂದ ಸಂಜೆ ಆರು ಗಂಟೆವರೆಗೆ ಸಂಪೂರ್ಣ ಕರ್ನಾಟಕ ಬಂದ್ ಮಾಡಲಾಗುತ್ತಿದೆ ಎಂದಿದ್ದಾರೆ.
ರಾಜ್ಯದ ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸಾರಿಗೆ ಚಾಲಕರ ಸಂಘಗಳು ಬೆಂಬಲ ಕೊಡುವಂತೆ ಮನವಿ ಮಾಡಿದ್ದಾರೆ.ಊಬರ್, ಆಟೋ ಸಂಚಾರ ಬಂದ್ ಆಗಬೇಕು ಮತ್ತು ವಿಮಾನಗಳ ಹಾರಾಟ ನಿಲ್ಲಿಸಬೇಕು ಎಂದು ವಾಟಾಳ್ ಹೇಳಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ಕೇಂದ್ರ ರಾಜ್ಯ ಎಲ್ಲವೂ ಕನ್ನಡಿಗರಿಗೆ ಮರಣ ಶಾಸನ ಬರೆದಿದ್ದಾರೆ. ಹೀಗಾಗಿ ಬಂದ್ ಘೋಷಣೆ ಮಾಡುತ್ತೇವೆ ಎಂದು ಕರವೇ ಬಣವೊಂದರ ಮುಖ್ಯಸ್ಥ ಪ್ರವೀಣ್ ತಿಳಿಸಿದ್ದಾರೆ. ನಮಗೆ ನ್ಯಾಯ ಸಿಗದ ಕಾರಣ ಹೋರಾಟ ರೂಪಿಸುತ್ತೇವೆ ಎಂದು ಸಾರಾ ಗೋವಿಂದು ಹೇಳಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ ಪ್ರತಿಭಟನೆ ದಾಖಲಿಸಿದೆ.
ಕರ್ನಾಟಕ ಬಂದ್ ಮಾಡಿದರೆ ರಾಜ್ಯಕ್ಕೆ ನಷ್ಟ, ತಮಿಳುನಾಡಿನವರಿಗೆ ನಷ್ಟವಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನೀರು ಬಿಡಲೇಬೇಕು. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸುಗ್ರೀವಾಜ್ಞೆ ತಂದರು, ಆ ಸುಗ್ರೀವಾಜ್ಞೆ ಏನಾಯ್ತು ಇವಾಗ?, ರಾಜ್ಯದ ರೈತರ ಹಿತದೃಷ್ಟಿಯಿಂದ ಹೋರಾಟ ಮಾಡಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗುವವರೆಗೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


