Menu

ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಕೆ ಶಿವಕುಮಾರ್

“ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ ಕೂಡಲೇ ಈ ವಾರದೊಳಗೆ ಎತ್ತಿನಹೊಳೆ ಕೆಲಸ ಪ್ರಾರಂಭ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಎತ್ತಿನಹೊಳೆ, ಮೇಕೆದಾಟು, ಭದ್ರಾ ಮೇಲ್ದಂಡೆ ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. “ತುಮಕೂರು ಭಾಗದಲ್ಲೂ ಭೂಸ್ವಾಧೀನಕ್ಕೆ ಸರ್ವೆ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಚಿಕ್ಕಬಳ್ಳಾಪುರ ಹಾಗೂ ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗಲಾಗುವುದು. ಎತ್ತಿನಹೊಳೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯವರು ಒಂದಷ್ಟು ಷರತ್ತುಗಳನ್ನು ವಿಧಿಸಿ ಕಡತವನ್ನು ವಾಪಸ್ ಕಳುಹಿಸಿದ್ದರು. ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಬದಲಿ ಭೂಮಿಯನ್ನು ಹಸ್ತಾಂತರ ಮಾಡಲಾಗುತ್ತಿದೆ. ಶೇ 10 ರಷ್ಟು ಭೂಮಿ ವರ್ಗಾವಣೆ ಬಾಕಿಯಿತ್ತು. ಮುಂದಿನ ಒಂದು ವಾರದೊಳಗೆ ಈ ಪ್ರಕ್ರಿಯೆ ನಡೆಯಲಿದೆ” ಎಂದರು.

“ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಹಾಗೂ ಮೇಕೆದಾಟು ವಿಚಾರವಾಗಿ ಸಂಬಂಧಪಟ್ಟ ಶಾಸಕರ, ಅಧಿಕಾರಿಗಳ ಸಭೆ ನಡೆಸಲಾಯಿತು. ಕಂದಾಯ, ಅರಣ್ಯ ಹಾಗೂ ಗೃಹಸಚಿವರು ಭಾಗವಹಿಸಿದ್ದರು. ಎತ್ತಿನಹೊಳೆ ವಿಚಾರವಾಗಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿದ್ದೆ. ನಾವು ಅವರ ಷರತ್ತುಗಳನ್ನು ಒಪ್ಪಿಕೊಂಡು ಮುಂದುವರೆದಿದ್ದೇವೆ” ಎಂದು ಹೇಳಿದರು.

“ಮೇಕೆದಾಟು ವಿಚಾರವಾಗಿ ಡಿಪಿಆರ್ ಸಿದ್ಧವಾಗಿದ್ದು ಅದನ್ನು ಸಹ ಸಮಿತಿ ಮುಂದೆ ಸಲ್ಲಿಕೆ ಮಾಡಲಾಗುವುದು. ಮತ್ತೊಮ್ಮೆ ವೆಚ್ಚ ಪರಿಷ್ಕರಣೆ ಮಾಡಿದ್ದೇವೆ. ಸುಮಾರು 5,300 ಎಕರೆ ಜಮೀನನ್ನು ನಾವು ಅರಣ್ಯ ಇಲಾಖೆಗೆ ನೀಡಬೇಕಿದೆ. ಇದರ ಬಗ್ಗೆಯೂ ಕಂದಾಯ ಇಲಾಖೆ ಜೊತೆ ಮಾತನಾಡಲಾಗುವುದು” ಎಂದರು.

ಬೆಂಗಳೂರು ನಗರ ಪ್ರದಕ್ಷಿಣೆ ಬಗ್ಗೆ ಕೇಳಿದಾಗ, “ಈಗಾಗಲೇ ಶಿಥಿಲ ಮರಗಳು, ಹಾಗೂ ಕೊಂಬೆಗಳ ತೆರವಿಗೆ ಸೂಚಿಸಲಾಗಿದೆ. ನೀರು ಹರಿವಿಗೆ ತಡೆಗಳನ್ನು ತೆರವುಗೊಳಿಸಲಾಗುವುದು. ಮೊದಲು ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ನಾಳೆ ಮೂರು ಗಂಟೆಗೆ ಬೆಂಗಳೂರು ನಗರ ಸಂಚಾರ ಮಾಡಲಿದ್ದೇನೆ. ಒಂದೆರಡು ಮೇಲ್ಸೆತುವೆಗಳ ಲೋಕಾರ್ಪಣೆಗೂ ಪೂಜೆ ನೆರವೇರಿಸಲಾಗುವುದು” ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *