Menu

ಧರೆಗುರುಳಿದ ಮರಪಾಠ ಕಲಿಯದ ಪಾಲಿಕೆ

bbmp

ಇಪ್ಪತ್ತು ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಹಳೆಯ ಮರಗಳ ಬಗ್ಗೆ ಎಚ್ಚರ ವಹಿಸುವ ಸಂಬಂಧ ಆಗಿನ ಲೋಕಾಯುಕ್ತರಾಗಿದ್ದ ಎನ್. ವೆಂಕಟಾಚಲ ಅವರು ಸರ್ಕಾರ ಮತ್ತು ಪಾಲಿಕೆ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಇದಕ್ಕೂ ಮುನ್ನ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎಂ, ಎಫ್. ಸಲ್ಡಾನಾ ಅವರೂ ಹಲವಾರು ಸಾರಿ ಸರ್ಕಾರ ಮತ್ತು ಪಾಲಿಕೆಯನ್ನು ಈ ದಿಶೆಯಲ್ಲಿ ಎಚ್ಚರಿಸಿದ್ದರು.

ಉದ್ಯಾನಗರಿ ಬೆಂಗಳೂರು ಹಾಗೂ ಮಳೆ- ಇವೆರೆಡೂ ಸರ್ಕಾರ ಅಥವಾ ಪಾಲಿಕೆಯ ನಿಯಂತ್ರಣಕ್ಕೆ ಸಿಲುಕದ ಗಂಭೀರ ಸಂಗತಿ. ದೇಶದಲ್ಲಿಯೇ ಅತಿ ತಂಪನೆಯ ನೆಲವಾದ ಬೆಂಗಳೂರಿನಲ್ಲಿ ಹತ್ತಾರು ಹೂದೋಟಗಳಿವೆ. ಈ ಹಸಿರಿನ ತೋಟಗಳು ಇಂದು ನಿನ್ನೆಯದಲ್ಲ. ಇದಕ್ಕೆ ಮೈಸೂರು ಮಹಾರಾಜರು ಮತ್ತು ಪಾಳೆಯಗಾರರ ಕೊಡುಗೆ ಅಪಾರ.

ನಗರದ ಕೇಂದ್ರ ಭಾಗದಲ್ಲಿ ಅತಿ ದೊಡ್ಡ ಕಬ್ಬನ್‌ಪಾರ್ಕ್ ಮತ್ತು ಲಾಲ್‌ಬಾಗ್ ಕೂಡಾ ಇದೆ. ಇವುಗಳ ನಡುವೆ ಬಸವನಗುಡಿ, ಮಲ್ಲೇಶ್ವರ, ಶೇಷಾದ್ರಿಪುರಂ ಜಯನಗರ, ಚಾಮರಾಜಪೇಟೆ ರಾಜಾಜಿನಗರ, ಮತ್ತು ಗಾಂಧಿನಗರ, ಶಿವಾಜಿನಗರ, ಹೆಬ್ಬಾಳದ ಸುತ್ತಲೂ ನುರಾರು ಮರಗಳಿವೆ. ಈ ಮರಗಳಿಗೂ, ಇಲ್ಲಿನ ನಾಗರಿಕರಿಗೂ ಅವಿನಾ ಸಂಬಂಧವಿದೆ. ಇಲ್ಲಿನ ಬಹಳಷ್ಟು ಮರಗಳಿಗೆ ಒಂದು ನೂರು ವರ್ಷಗಳ ಇತಿಹಾಸವೂ ಇದೆ. ಆದರೆ ಇವುಗಳ ಸಂರಕ್ಷಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಮುಗ್ಗರಿಸಿದೆ ಎನ್ನದೆ ವಿಧಿಯಿಲ್ಲ.

ಉದ್ಯಾನನಗರಿಗೆ ಮರಗಳು ಬೇಡ ಎಂಬುದಲ್ಲ. ಆದರೆ ಇತ್ತೀಚಿನ ಬೃಹತ್ ಕಾಮಗಾರಿಗಳ ಫಲವಾಗಿ, ಇದು ಹಳೆಯ ಮರಗಳ ಬೇರುಗಳನ್ನು ದುರ್ಬಲಗೊಳಿಸಿರುವುದು ನಿಜ. ಇದಕ್ಕೆ ಮರ ಸಂರಕ್ಷಣೆ ಸಂಸ್ಥೆ ನಡೆಸಿರುವ ಪ್ರಮುಖ ವೈಜ್ಞಾನಿಕ ಸಮೀಕ್ಷೆಯೆ ಆಧಾರ. ಅಪಾರ್ಟ್‌ಮೆಂಟ್ ಮತ್ತು ಮೆಟ್ರೋ ರೈಲು ಯೋಜನೆಯ ಮೆಷಿನ್ ಫೌಂಡೇಷನ್ ಸಮಯದಲ್ಲಿ ಬೃಹತ್ ಯಂತ್ರಗಳು ಬಳಕೆಯಾಗುತ್ತಿವೆ. ಈ ಯಂತ್ರಗಳ ರಭಸ ಮತ್ತು ಕಂಪನಕ್ಕೆ ಹಳೆಯ ಮರಗಳ ಬೇರುಗಳು ಸಡಿಲಗೊಂಡಿರುವುದು ವಾಸ್ತವ. ಶೇಷಾದ್ರಿಪುರಂ, ಮಲ್ಲೇಶ್ವರಂ ಸುತ್ತಮುತ್ತಲೂ ಮೊನ್ನೆ, ಬುಡಸಹಿತ ಉರುಳಿದ ಕೆಲವು ಮರಗಳ ಹಿನ್ನೆಲೆಯನ್ನು ಗಮನಿಸಿದಾಗ ಇದಕ್ಕೆ ರಾಕ್ಷಸೀ ನಿರ್ಮಾಣಗಳೇ ಕಾರಣ ಎಂಬುದು ನಿರ್ವಿವಾದ. ಜನವಸತಿ ಪ್ರದೇಶದಲ್ಲಿ ರಸ್ತೆಗೆ ಚಾಚಿರುವ ಮರದ ಕೊಂಬೆಗಳನ್ನು ಬೆಸ್ಕಾಂ ಸಿಬ್ಬಂದಿ ಕತ್ತರಿಸುವುದು ಬೇರೆ ವಿಷಯ. ಕೊಂಬೆಗಳನ್ನು ಕತ್ತರಿಸಿದ ಮಾತ್ರಕ್ಕೆ ಮರದ ಸಮಸ್ಯೆ ಕೊನೆಗಾಣದು. ಇದರಿಂದ ಮಳೆಗಾಲದ ಮರಗಳ ಉರುಳುವಿಕೆ ಸಂಕಷ್ಟ ಬಗೆಹರಿಯದು.

ಲೋಕಾಯುಕ್ತರೀಗ ಚಾಮರಾಜಪೇಟೆ ಕೋಟೆಯ ಬಳಿ ಮಣ್ಣು ಕುಸಿದು ಏಳು ಮಂದಿ ಸಾವಿಗೀಡಾಗಿರುವ ಪ್ರಕರಣವನ್ನು ಸುಮೋಟೋ ಆಗಿ ತನಿಖೆಗೆ ಕೈಗೆತ್ತಿಕೊಂಡಿರುವುದು ಗಮನಾರ್ಹ. ಇಪ್ಪತ್ತು ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಹಳೆಯ ಮರಗಳ ಬಗ್ಗೆ ಎಚ್ಚರ ವಹಿಸುವ ಸಂಬಂಧ ಆಗಿನ ಲೋಕಾಯುಕ್ತರಾಗಿದ್ದ ಎನ್. ವೆಂಕಟಾಚಲ ಅವರೂ ಸರ್ಕಾರ ಮತ್ತು ಪಾಲಿಕೆ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದಿದ್ದರು. ಇದಕ್ಕೂ ಮುನ್ನ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎಂ, ಎಫ್. ಸಲ್ಡಾನಾ ಅವರು ಹಲವಾರು ಸಾರಿ ಸರ್ಕಾರ ಮತ್ತು ಪಾಲಿಕೆಯನ್ನು ಈ ದಿಶೆಯಲ್ಲಿ ಎಚ್ಚರಿಸಿದ್ದುಂಟು. ಈಗ ಇದರ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತರೀಗ ಉದ್ಯಾನ ನಗರಿಯ ಸಮಸ್ಯೆಯ ತನಿಖೆಯನ್ನು ಕೇವಲ ಸಾವುಗಳಿಗೆ ಸೀಮಿತಗೊಳಿಸದೆ ಹಳೆಯ ಮರಗಳು, ಮಳೆ ಮತ್ತು ಇವುಗಳ ಸಂರಕ್ಷಣೆ ಕುರಿತು ಅರ್ಥಪೂರ್ಣ ತನಿಖೆ ನಡೆಸಿದ್ದಲ್ಲಿ ಇದರಿಂದ ಉದ್ಯಾನ ನಗರಿಯು ಮುಂದಿನ ದಿನಗಳಲ್ಲಿ ಮಳೆಯ ಅವಾಂತರಗಳಿಂದ ಪಾರಾಗಲು ಸಾಧ್ಯವಾದೀತು.

Related Posts

Leave a Reply

Your email address will not be published. Required fields are marked *