ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಉಭಯ ದೇಶಗಳ ನಡುವೆ ನೇರ ಸಂಘರ್ಷ ಸಂಭವಿಸಬಹುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಬೀಜಿಂಗ್‌ನಲ್ಲಿ ನಡೆದ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಮಾತನಾಡಿದ ಅವರು ತೈವಾನ್ ವಿಷಯವು ಅಮೆರಿಕ-ಚೀನಾ ಸಂಬಂಧಗಳಲ್ಲೇ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖವಾದದ್ದು ಎಂದು ಹೇಳಿದ್ದಾರೆ. ಈ ವಿಷಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ದೊಡ್ಡ ಆರ್ಥಿಕತೆಗಳ ಘರ್ಷಣೆ ಆರಂಬವಾಗಬಹುದು. ತೈವಾನ್ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಇಡೀ ಅಮೆರಿಕ-ಚೀನಾ ದ್ವಿಪಕ್ಷೀಯ ಸಂಬಂಧ ಅಪಾಯಕಾರಿ ಸ್ಥಿತಿಗೆ ತಲುಪಬಹುದು ಎಂದು ವಾರ್ನ್ ಮಾಡಿದ್ದಾರೆ.
ತೈವಾನ್‌ನ ಸ್ವಾತಂತ್ರ್ಯ ಮತ್ತು ತೈವಾನ್ ಜಲಸಂಧಿಯಲ್ಲಿನ ಶಾಂತಿ ‘ಬೆಂಕಿ ಮತ್ತು ನೀರು’ ಇದ್ದಂತೆ, ಎಂದಿಗೂ ಜೊತೆಯಾಗಿರಲು ಸಾಧ್ಯವಿಲ್ಲ. ಅಮೆರಿಕವು ತೈವಾನ್‌ಗೆ ನೀಡುತ್ತಿರುವ ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒಪ್ಪಂದ ನಿಲ್ಲಿಸಬೇಕು ಮತ್ತು ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಖಡಕ್ ಮಾತುಗಳಲ್ಲಿ ತಿಳಿಸಿದ್ದಾರೆ.
ತೈವಾನ್ ವಿಷಯವನ್ನು ಸರಿಯಾಗಿ ನಿಭಾಯಿಸಿದರೆ ಮಾತ್ರ ಉಭಯ ದೇಶಗಳ ಸಂಬಂಧ ಸ್ಥಿರವಾಗಿರುತ್ತದೆ. ಚೀನಾ ಮತ್ತು ಅಮೆರಿಕ ಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ಇದು ಚೀನಾದ ಅತ್ಯಂತ ಪ್ರಮುಖ ಮತ್ತು ಮೊದಲನೇ ಕೆಂಪು ಗೆರೆಯಾಗಿದೆ. ತೈವಾನ್ ದೇಶವು ಚೀನಾದ ಅವಿಭಾಜ್ಯ ಅಂಗವಾಗಿದ್ದು, ಅಮೆರಿಕ ಅದರ ಸ್ವಾತಂತ್ರ್ಯವನ್ನು ಬೆಂಬಲಿಸಬಾರದು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಬಾರದು ಎಂದಿದ್ದಾರೆ.
ಪಾಶ್ಚಿಮಾತ್ಯ ದೇಶಗಳು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೆಸರಿನಲ್ಲಿ ಚೀನಾದ ಆಂತರಿಕ ಆಡಳಿತವನ್ನು ಟೀಕಿಸುವುದನ್ನು ಚೀನಾ ವಿರೋಧಿಸುತ್ತದೆ. ಹಾಂಕಾಂಗ್, ಕ್ಸಿಂಜಿಯಾಂಗ್ (ಉಯ್ಘರ್ ಮುಸ್ಲಿಮರ ವಿಷಯ) ಮತ್ತು ಟಿಬೆಟ್ ವಿಷಯಗಳು ಚೀನಾದ ಆಂತರಿಕ ವಿಚಾರಗಳಾಗಿದ್ದು, ಇದರಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬಾರದು ಎಂದು ಬಯಸುತ್ತದೆ.


