Menu

ಉತ್ತರಪ್ರದೇಶದಲ್ಲಿ ಮಳೆ, ಬಿರುಗಾಳಿ, ಸಿಡಿಲಿಗೆ 89 ಜನ ಬಲಿ

ಉತ್ತರ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ, ಬೀಸುತ್ತಿರುವ ಬಿರುಗಾಳಿ, ಸಿಡಿಲಿಗೆ ಕನಿಷ್ಠ 89 ಜನ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿರುಗಾಳಿಯಿಂದ ಆದ ಅನಾಹುತಗಳಲ್ಲಿ ೫೩ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 114ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. 87 ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಮರಗಳು ಉರುಳಿ ಬಿದ್ದು ಮತ್ತು ಗೋಡೆ ಕುಸಿದು ಹೆಚ್ಚಿನ ಸಾವುಗಳು ಸಂಭವಿಸಿವೆ.

ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳ ಒಳಗೆ ಪರಿಹಾರ ಧನ ವಿತರಿಸುವಂತೆ ಸಿಎಂ ಆದಿತ್ಯನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಕ್ಷಣದ ನೆರವು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಮತ್ತು ಹಾನಿಗೊಳಗಾದ ಮನೆಗಳ ಪುನರ್ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬಿರುಗಾಳಿ ಮತ್ತು ಸಿಡಿಲಿನಿಂದ ರೈತರ ಬೆಳೆಗಳು, ಹಣ್ಣು-ತರಕಾರಿ ತೋಟಗಳು ನಾಶವಾಗಿದ್ದು, ವಿದ್ಯುತ್ ಸಂಪರ್ಕ ವ್ಯತ್ಯಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದು ಸಂಚಾರಕ್ಕೂ ಅಡ್ಡಿಯಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ ಎರಡು ದಿನ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಬಿರುಗಾಳಿ ಮತ್ತು ಸಿಡಿಲು ಸಂಭವಿಸುವ ಸಾಧ್ಯತೆ ಇದೆ.

Related Posts

Leave a Reply

Your email address will not be published. Required fields are marked *