ಧುರಂಧರ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ನಿರ್ದೇಶಕ ಆದಿತ್ಯ ಧರ್ ಅವರಿಗೆ ವ್ಯಾಪಂ ಹಗರಣದ ಬಗ್ಗೆಯೂ ಒಂದು ಸಿನಿಮಾ ಮಾಡಿ ಎಂದು ಸಚಿವ ಸಂತೋಷ್ ಲಾಡ್ ಸಲಹೆ ನೀಡಿದರು. ವ್ಯಾಪಂ ಹಗರಣ ಮುಚ್ಚಲು ಈವರೆಗೆ 44 ಜನರ ಕಗ್ಗೊಲೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಹಗರಣ ಮುಚ್ಚಿಹಾಕಲು ಇಷ್ಟೆಲ್ಲ ಜನರನ್ನ ಕೊಲೆ ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದರೂ ಸಹ ಈ ಬಗ್ಗೆ ಬಿಜೆಪಿಯವರು ಮಾತನಾಡುವುದೇ ಇಲ್ಲ. ಈ ಬಗ್ಗೆ ಧುರಂಧರ್ ರೀತಿ ಸಿನಿಮಾ ಮಾಡಿ ದೇಶದ ಜನರಿಗೆ ವ್ಯಾಪಂ ಹಗರಣದ ಬಗ್ಗೆ ಬೆಳಕು ಚೆಲ್ಲುವಂತೆ ಸಂತೋಷ್ ಲಾಡ್ ನಿರ್ದೆಶಕ ಧರ್‌ಗೆ ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಂತೋಷ್ ಲಾಡ್ ಮತ್ತೆ ಗುಡುಗಿದ್ದಾರೆ. ನೀಟ್ ಪರೀಕ್ಷೆ ಹಗರಣ ಹಾಗೂ ಪರೀಕ್ಷೆ ರದ್ದತಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸಂತೋಷ್ ಲಾಡ್, ನರೇಂದ್ರ ಮೋದಿ ಸರ್ಕಾರ ದೇಶದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಗುಡುಗಿದರು.
ವ್ಯಾಪಂ ಹಗರಣವು ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ (MPPEB -Vyapam) ನಡೆಸಿದವೈದ್ಯಕೀಯ ಮತ್ತು ಸರ್ಕಾರಿ ಉದ್ಯೋಗ ನೇಮಕ ಪರೀಕ್ಷೆಗಳಲ್ಲಿ ನಡೆದ ಬೃಹತ್ ಭ್ರಷ್ಟಾಚಾರ. 1990ರ ದಶಕದಿಂದ ನಡೆದುಬಂದ ಈ ಹಗರಣ 2013ರಲ್ಲಿ ಬೆಳಕಿಗೆ ಬಂದಿದೆ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಶಾಮೀಲಾಗಿ ನಕಲಿ ಪರೀಕ್ಷಾರ್ಥಿಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ನೇಮಕ ಮತ್ತಿತರ ಅವಾಂತರಗಳು ನಡೆದಿವೆ.


