Menu

ಚಿನ್ನದ ಬೆಲೆಯಲ್ಲಿ ಶೇ 20ರಷ್ಟು ಇಳಿಕೆಯಾಗಲಿದೆಯಾ?

ಜಾಗತಿಕ ರಾಜಕೀಯ ಉದ್ವಿಗ್ನತೆ, ಆರ್ಥಿಕ ಅಸ್ಥಿರತೆ, ಹೆಚ್ಚುತ್ತಿರುವ ಹಣದುಬ್ಬರ ನಡುವೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ ವರದಿ ತಿಳಿಸಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಂಗಾರದ ಬೆಲೆ ಶೇ 5 ರಿಂದ 20 ಕುಸಿಯಬಹುದು ಎನ್ನುವ ಎಚ್ಚರಿಕೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. 2025ರಲ್ಲಿ ಚಿನ್ನ ಶೇ 66 ರಷ್ಟು ಮತ್ತು ಬೆಳ್ಳಿ ಶೇ 135 ರಷ್ಟು ಏರಿಕೆ ಕಂಡಿದೆ. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಒತ್ತಡ ಹೆಚ್ಚಾಗಿದೆ. ಪ್ರಸ್ತುತ ಔನ್ಸ್ ಚಿನ್ನದ ಬೆಲೆ 4,680 ಡಾಲರ್‌ ಆಸುಪಾಸಿನಲ್ಲಿದೆ. ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1.58 ಲಕ್ಷ ರೂಪಾಯಿ ಇದ್ದು, 20 ರಷ್ಟು ಇಳಿಕೆಯಾದರೆ ಬೆಲೆ 1.26 ಲಕ್ಷಕ್ಕೆ ಕುಸಿಯುವ ಸಾಧ್ಯತೆ ಇದೆ. ಈ ಬೆಳವಣಿಗೆಗೆ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮೂಲ ಕಾರಣ ಎನ್ನಲಾಗುತ್ತಿದೆ. ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದು ಜಾಗತಿಕವಾಗಿ ಹಣದುಬ್ಬರದ ಭೀತಿ ಮರುಕಳಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಏರಿಕೆಯಲ್ಲೇ ಮುಂದುವರಿಸುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಬಂಗಾರದ ಬದಲು ಬಾಂಡ್‌ಗಳತ್ತ ನೋಡುತ್ತಿದ್ದಾರೆ.

ಬಂಗಾರದಲ್ಲಿ ಬಡ್ಡಿ ಸಿಗುವುದಿಲ್ಲವಾದ್ದರಿಂದ ಹೂಡಿಕೆದಾರರು ಚಿನ್ನದ ಮೇಲೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಬಲಗೊಳ್ಳುತ್ತಿದೆ. ಚಿನ್ನದ ವ್ಯವಹಾರ ಡಾಲರ್ ಆಧಾರಿತವಾಗಿರುವುದರಿಂದ ಡಾಲರ್ ಮೌಲ್ಯ ಏರಿಕೆಯಾದಷ್ಟೂ ಇತರ ದೇಶಗಳಿಗೆ ಚಿನ್ನ ಖರೀದಿ ದುಬಾರಿಯಾಗುತ್ತದೆ. ಬೇಡಿಕೆ ಕಡಿಮೆಯಾಗಿ ಮಾರುಕಟ್ಟೆಯ ಮೇಲೆ ಒತ್ತಡ ಹೆಚ್ಚುತ್ತಿದೆ. ಡಾಲರ್ ಬಲವೇ ಚಿನ್ನದ ಬೆಲೆಗೆ  ತೊಡಕಾಗಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಭೌಗೋಳಿಕ ಸಂಘರ್ಷಗಳು, ತೈಲ ಬೆಲೆಯಿಂದ ಏರುವ ಹಣದುಬ್ಬರ ಮತ್ತು ಅಮೆರಿಕದ ಬಡ್ಡಿ ದರಗಳ ನೀತಿಗಳಲ್ಲಿ ಏನೇ ಸಣ್ಣ ಬದಲಾವಣೆಯಾದರೂ ಬಂಗಾರದ ಬೆಲೆಯಲ್ಲಿ ಏರಿಳಿತಗಳಾಗುತ್ತವೆ. ದೀರ್ಘಾವಧಿಯ ಹೂಡಿಕೆದಾರರು ಬಂಗಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ದೊಡ್ಡ ಆರ್ಥಿಕ ಸಂಸ್ಥೆಗಳು ಇಂದಿಗೂ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿಯೇ ಪರಿಗಣಿಸುತ್ತಿವೆ.

Related Posts

Leave a Reply

Your email address will not be published. Required fields are marked *