Menu

ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದಲ್ಲಿ ಮುಂದಿನ ಏಳು ದಿನ ಮುಂಗಾರು ಪೂರ್ವ ಮಳೆ ಅಬ್ಬರಿಸಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿರುಗಾಳಿಯ ವೇಗ ತೀವ್ರವಾಗಿರುವುದರಿಂದ ಬೋರ್ಗೆರೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ನೀಡಿವೆ. ಕರಾವಳಿ ಭಾಗದಲ್ಲಿ ನಿರಂತರ ಮಳೆ ಹಾಗೂ ಬಲವಾದ ಸಮುದ್ರ ಗಾಳಿ ಬೀಸಲಿದೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಮಳೆ ಸುರಿಯುವ ಮುನ್ಸೂಚನೆ ಇದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಶನಿವಾರ ಸಾಧಾರಣ ಮಳೆ ಸುರಿದರೆ ಭಾನುವಾರ ಮತ್ತು ಸೋಮವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಲಿದೆ.

ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ. ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಕಲಬುರಗಿ ಮತ್ತು ರಾಯಚೂರಿನಲ್ಲಿ ತೀವ್ರ ಸೆಕೆ ಮುಂದುವರಿಯಲಿದೆ.

ಚಂಡಮಾರುತ ಅಥವಾ ಭಾರಿ ಗಾಳಿ-ಮಳೆ ಆರಂಭವಾದ ತಕ್ಷಣ ನಾಗರಿಕರು ತೆರೆದ ಪ್ರದೇಶಗಳಲ್ಲಿ ಇರದೆ ಸುರಕ್ಷಿತ ಕಟ್ಟಡಗಳ ಒಳಗೆ ಹೋಗಬೇಕು. ಹಳೆಯ ಮರಗಳು, ಬೃಹತ್ ಜಾಹೀರಾತು ಫಲಕಗಳು (ಬ್ಯಾನರ್) ಅಥವಾ ವಿದ್ಯುತ್ ಕಂಬಗಳ ಕೆಳಗೆ ನಿಲ್ಲುವುದನ್ನು ಹಾಗೂ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಬೇಕು. ಕೊಯ್ಲು ಮಾಡಿ ಇಡಲಾಗಿರುವ ಬೆಳೆಗಳನ್ನು ಸುರಕ್ಷಿತವಾಗಿ ಮುಚ್ಚಿಡಬೇಕು ಎಂದು ಸೂಚಿಸಲಾಗಿದೆ.

Related Posts

Leave a Reply

Your email address will not be published. Required fields are marked *