Saturday, October 17, 2026
Menu

ನೋಯ್ಡಾದಲ್ಲಿ ಭೀಕರ ದುರಂತ: ರಾತ್ರಿ ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರು ಸಾವು!

ಉದಯಕಾಲ ನ್ಯೂಸ್, ಲಕ್ನೋ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವ್ಯಾಪ್ತಿಯಲ್ಲಿ ಅತ್ಯಂತ ಆಘಾತಕಾರಿ ಹಾಗೂ ಶೋಚನೀಯ ಘಟನೆಯೊಂದು ನಡೆದಿದೆ. ರಬೂಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಂಗ್ಲಾ ಶ್ರೀಗೋಪಾಲ್ (ನಂಗ್ಲಾ ಪದಮ್) ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಮಹೇಶ್ (37), ಪತ್ನಿ ಲಲಿತಾ (35) ಹಾಗೂ ಅವರ ಮಕ್ಕಳಾದ ಲಡ್ಡು (11), ಮಿಶ್ತಿ (7) ಮತ್ತು ಸಾಕ್ಷತ್ (3) ಎಂದು ಗುರುತಿಸಲಾಗಿದೆ.

ಪ್ರಾಣ ತೆಗೆದ ಮ್ಯಾಗಿ

ಪ್ರಾಥಮಿಕ ತನಿಖೆ ಮತ್ತು ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ರಾತ್ರಿ ಈ ಕುಟುಂಬವು ಹತ್ತಿರದ ಮೇಳಕ್ಕೆ ತೆರಳಿ ವಾಪಸ್ ಬಂದಿತ್ತು. ರಾತ್ರಿ ಸುಮಾರು 10 ಗಂಟೆಯ ಬಳಿಕ ಮನೆಗೆ ಬಂದವರು ಊಟದ ಬದಲಿಗೆ ಚಹಾ ಮತ್ತು ನೂಡಲ್ಸ್ (ಮ್ಯಾಗಿ) ತಯಾರಿಸಿ ಸೇವಿಸಿ ಮಲಗಿದ್ದರು. ಆದರೆ ಬೆಳಗಾದರೂ ಈ ಮನೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದು ಬಾಗಿಲು ತೆಗೆದು ನೋಡಿದಾಗ ದಂಪತಿ ಹಾಗೂ ಮೂರು ಮಕ್ಕಳು ಸೇರಿದಂತೆ ಐವರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಫುಡ್ ಪಾಯ್ಸನ್ ಶಂಕೆ

ಮನೆಯವರು ರಾತ್ರಿ ಸೇವಿಸಿದ ಆಹಾರದಲ್ಲಿ ವಿಷಾಂಶ ಸೇರಿಕೊಂಡಿರಬಹುದು (Food Poisoning) ಎಂದು ಪೊಲೀಸರು ಮತ್ತು ವೈದ್ಯಕೀಯ ತಂಡ ಪ್ರಾಥಮಿಕವಾಗಿ ಶಂಕಿಸಿದೆ. ಆದಾಗ್ಯೂ, ಸಾವಿಗೆ ನಿಖರವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ (Post-mortem) ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ತಿಳಿದುಬರಲಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಬೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ. ಒಂದೇ ಕುಟುಂಬದ ಐವರು ಸಾಮೂಹಿಕವಾಗಿ ಸಾವನ್ನಪ್ಪಿರುವ ಈ ಘಟನೆಯಿಂದ ಇಡೀ ಗ್ರಾಮದಲ್ಲಿ ತೀವ್ರ ಶೋಕ ಮಡುಗಟ್ಟಿದೆ.
#GreaterNoida #UttarPradesh #FoodPoisoning #TragicNews #Rabupura #NoidaNews #BreakingNewsKannada #FamilyDeath #KannadaNews

Related Posts

Leave a Reply

Your email address will not be published. Required fields are marked *