ಅಮೆರಿಕದಲ್ಲಿ ಟ್ರಂಪ್ ಆಡಳಿತವು ವೀಸಾ ಹಾಗೂ ವಲಸೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುತ್ತಿದ್ದು, ಅಲ್ಲಿ ಉದ್ಯೋಗ ಮಾಡುತ್ತಿರುವ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿರುವ ಭಾರತೀಯರಿಗೆ ಹೊಸ ಆತಂಕ ತಂದೊಡ್ಡಿದೆ.
ಹೆಚ್೧ಬಿ ವೀಸಾ ನವೀಕರಣದಲ್ಲಿ ವಿಳಂಬ ಮತ್ತು ಸಂದರ್ಶನ ದಿನಾಂಕ ಸಿಗದೆ ಭಾರತೀಯರ ಪ್ರಯಾಣ ಯೋಜನೆಗಳೂ ದಿಕಕು ತಪ್ಪಿದಂತಾಗಿದೆ. ಕುಟುಂಬ ಭೇಟಿ, ಉದ್ಯೋಗ ಬದಲಾವಣೆ, ವಿದೇಶ ಪ್ರಯಾಣದ ನಿರ್ಧಾರಗಳ ಮೇಲೆ ಈ ಬೆಳವಣಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗ ಎಂಬ ಘೋಷಣೆಯೊಂದಿಗೆ ಟ್ರಂಪ್ ಸರ್ಕಾರ ಅಕ್ರಮ ವಲಸೆಯ ಜೊತೆಗೆ ಕಾನೂನುಬದ್ಧ ವಲಸೆಯ ಮಾರ್ಗಗಳ ಮೇಲೂ ನಿರ್ಬಂಧಗಳನ್ನು ಹೇರಿದೆ. H-1B, L-1 ವೀಸಾ ಮತ್ತು ಗ್ರೀನ್ ಕಾರ್ಡ್ ಪ್ರಕ್ರಿಯೆಗಳಲ್ಲಿ ಹೆಚ್ಚಿದ ಪರಿಶೀಲನೆ, ದೀರ್ಘ ಕಾಯುವಿಕೆ ಹಾಗೂ ಹೊಸ ಷರತ್ತುಗಳು ವಿದೇಶಿ ವೃತ್ತಿಪರರ ಜೀವನದಲ್ಲಿ ಅನಿಶ್ಚಿತತೆ ಹೆಚ್ಚಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸ ಪ್ರಸ್ತಾವದನ್ವಯ H-1B ಅರ್ಜಿಗಳಿಗೆ ಸಾಮಾನ್ಯ ಶುಲ್ಕದ ಜೊತೆಗೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗಬಹುದು. ಎಲ್ಲ H-1B ವೀಸಾಗಳಿಗೆ 1,03,265 ಡಾಲರ್ ( 1 ಕೋಟಿ ರೂ.) ಶುಲ್ಕ ವಿಧಿಸುವ ಯೋಜನೆ ಚರ್ಚೆಯಲ್ಲಿದೆ. ಉದ್ಯೋಗ ಕಳೆದುಕೊಂಡವರಿಗೆ ಮತ್ತೊಂದು ಕೆಲಸ ಹುಡುಕಲು ಸಿಗುವ 60 ದಿನ ಕಾಲಾವಕಾಶವನ್ನು ರದ್ದುಪಡಿಸುವ ಪ್ರಸ್ತಾವವೂ ಇದೆ. ವಿದ್ಯಾರ್ಥಿಗಳ ಐಚ್ಛಿಕ ಪ್ರಾಯೋಗಿಕ ತರಬೇತಿಗೆ ಸಂಬಂಧಿಸಿದ ದಾಖಲೆ ಸಲ್ಲಿಕೆಯ ಅವಧಿಯನ್ನು 60 ದಿನಗಳಿಂದ 30 ದಿನಗಳಿಗೆ ಇಳಿಸಲಾಗಿದೆ.
ಸಾಮಾಜಿಕ ಮಾಧ್ಯಮ ಖಾತೆಗಳ ಪರಿಶೀಲನೆ, ವೀಸಾ ಸಂದರ್ಶನದ ವಿಳಂಬ, ದುಬಾರಿ ಜೀವನ ಹಾಗೂ ಉದ್ಯೋಗಾವಕಾಶಗಳ ಕುಸಿತದಿಂದ ಹಲವರು ಜರ್ಮನಿ ಸೇರಿದಂತೆ ಯುರೋಪಿನ ದೇಶಗಳನ್ನು ಪರ್ಯಾಯವಾಗಿ ಪರಿಗಣಿಸುತ್ತಿದ್ದಾರೆ. ಶಿಕ್ಷಣ ಸಾಲ ಪಡೆದ ಕುಟುಂಬಗಳಿಗೆ ಮುಂದಿನ ಉದ್ಯೋಗದ ಭರವಸೆಯೂ ದೊಡ್ಡ ಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಅಮೆರಿಕ ನೀಡುವ H-1B ವೀಸಾಗಳಲ್ಲಿ ಶೇ.71ರಷ್ಟು ಭಾರತೀಯರಿಗೆ ಸಿಗುವುದರಿಂದ ಕಠಿಣ ನಿಯಮಗಳ ಹೊಡೆತ ಭಾರತಕ್ಕೇ ಹೆಚ್ಚು.


