ಬಾಗಲಕೋಟೆ ಜಿಲ್ಲೆಯಲ್ಲಿ ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನಿಬ್ಬರು ಐಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಟಾಪೂರ ಗ್ರಾಮದ ಭರಮಪ್ಪ ಮಲ್ಲಪ್ಪ ಕಂಡೇಕರ (24) ಹಾಗೂ ಐಹೊಳೆ ಗ್ರಾಮದ ರಾಮವ್ವ ಗಂಡ ದ್ಯಾಮಪ್ಪ ಹೋಳಗೆ (68) ಮೃತಪಟ್ಟವರು. ಕಾಟಾಪೂರ ಗ್ರಾಮದ ಮುತ್ತಪ್ಪ ಮಲ್ಲಪ್ಪ ಕಂಡೇಕರ (70), ಜ್ಯೋತಿ ಕಳಕಪ್ಪ ಕಂಡೇಕರ (32) ಹಾಗೂ ಐಹೊಳೆ ಗ್ರಾಮದ ಜ್ಯೋತಿ ಶರಣಪ್ಪ ಕುರಿ (32), ರೇಣವ್ವ ಹನಮಂತ ಸುಟ್ಟನ್ನವರ (35) , ಕಾಟಾಪೂರ ಗ್ರಾಮದ ನಾಗವ್ವ ಪರಸಪ್ಪ ಕಂಡೇಕರ ಹಾಗೂ ಸಾವಂತರವ್ವ ಯಲ್ಲಪ್ಪ ಕಂಡೇಕರ ಗಾಯಗೊಂಡವರು.
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ವೈದ್ಯರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಮಳೆಗಾಳಿ ಅವಘಡ : ಅಪರಿಚಿತ ವ್ಯಕ್ತಿ ಸಾವು
ಬಾಗಲಕೋಟೆ ಪಟ್ಟಣದಲ್ಲಿ ಸುರಿದ ಮಳೆಗಾಳಿ ವೇಳೆ ಮರ ಬಿದ್ದು ಹಾಗೂ ವಿದ್ಯುತ್ ತಂತಿಯಿಂದ ವಿದ್ಯುತ್ ಹರಿದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಮಳೆ ಹಾಗೂ ಸಿಡಿಲಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


