ಉದಯಕಾಲ ನ್ಯೂಸ್, ಮಡಿಕೇರಿ: ವಿರಾಜಪೇಟೆ ತಾಲೂಕಿನ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಹುಲಿಯೊಂದು ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕಾಫಿ ತೋಟದ ಕಾರ್ಮಿಕರು ಭಯಭೀತರಾಗಿದ್ದಾರೆ.
ಸಿದ್ದಾಪುರ – ಮೈಸೂರು ಮುಖ್ಯ ರಸ್ತೆಯ ಬದಿಯಲ್ಲಿ ಹುಲಿ ಓಡಾಡುತ್ತಿರುವ ದೃಶ್ಯವು ವಾಹನ ಸವಾರರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಈ ಹುಲಿ, ಬಳಿಕ ಸಮೀಪದಲ್ಲೇ ಇರುವ ಟಾಟಾ ಎಸ್ಟೇಟ್ ಕಡೆಗೆ ತೆರಳಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅರಣ್ಯ ಇಲಾಖೆಯಿಂದ ಗಸ್ತು ಹಾಗೂ ಎಚ್ಚರಿಕೆ
ಈ ಪ್ರದೇಶದಲ್ಲಿ ಹುಲಿ ಸಂಚರಿಸುತ್ತಿರುವುದು ದೃಢಪಟ್ಟಿರುವುದರಿಂದ, ಅರಣ್ಯ ಇಲಾಖೆಯು ತುರ್ತು ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಮತ್ತು ತೋಟದ ಕಾರ್ಮಿಕರು ತೋಟಗಳಿಗೆ ಒಂಟಿಯಾಗಿ ತೆರಳಬಾರದು. ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ರೈತರು ಒಂಟಿಯಾಗಿ ಹೋಗದೆ, ಗುಂಪಾಗಿ ಹೋಗಬೇಕು.ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಹುಲಿ ಕಾಣಿಸಿಕೊಂಡರೆ ಅದರ ಸಮೀಪಕ್ಕೆ ಹೋಗುವುದು, ಫೋಟೋ/ವೀಡಿಯೋ ಮಾಡಲು ಪ್ರಯತ್ನಿಸುವ ಅಥವಾ ಅದನ್ನು ಹಿಂಬಾಲಿಸಿ ಪ್ರಚೋದಿಸುವ ಸಾಹಸಕ್ಕೆ ಕೈಹಾಕಬಾರದು. ಎಂಬ ಮುನ್ನೆಚ್ಚರಿಕೆಗಳನ್ನು ಅರಣ್ಯ ಇಲಾಖೆ ನೀಡಿದ್ದು ಚಾಚೂ ತಪ್ಪದೆ ಪಾಲಿಸುವಂತೆ ಜನತೆಗೆ ಮನವಿ ಮಾಡಿದೆ. ಹುಲಿ ಅಥವಾ ಯಾವುದೇ ವನ್ಯಜೀವಿ ಕಂಡುಬಂದಲ್ಲಿ ಕೂಡಲೇ ಹತ್ತಿರದ ಅರಣ್ಯ ಇಲಾಖೆಗೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.
#Virajpete #KodaguNews #TigerSighting #UdayakalaNews #KarnatakaForestDepartment #Siddapura #MysoreRoad #CoffeeEstate #WildlifeAlert #Kodagu


