ಪಾಟ್ನಾ (ಬಿಹಾರ): ಕಠಿಣ ಪರಿಶ್ರಮ ಮತ್ತು ಸರಿಯಾದ ಬೆಳೆಯ ಆಯ್ಕೆ ಇದ್ದರೆ ಕೃಷಿಯೂ ಸಹ ಬಡವರ ಬದುಕನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಬಿಹಾರದ ಗಯಾ (ಗಯಾಜಿ) ಜಿಲ್ಲೆಯ ಖಂಜಹಾನ್ಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳೇ ಜೀವಂತ ಸಾಕ್ಷಿಯಾಗಿವೆ. ಒಂದು ಕಾಲದಲ್ಲಿ ಕನಿಷ್ಠ ಒಂದು ಸೈಕಲ್ ಖರೀದಿಸಲೂ ಆರ್ಥಿಕ ಸಂಕಷ್ಟ ಪಡುತ್ತಿದ್ದ ರೈತ ಸುರೇಶ್ ಪ್ರಸಾದ್ ಅವರ ಮನೆಯಲ್ಲಿ ಇಂದು ಐಷಾರಾಮಿ ಕಾರು ನಿಂತಿದೆ. ಅವರ ಪುತ್ರ ಇಂದು ಭಾರತೀಯ ರೈಲ್ವೆಯಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ. ಈ ಪವಾಡಸದೃಶ ಬದಲಾವಣೆಗೆ ಮೂಲ ಕಾರಣ ಬೇರೇನೂ ಅಲ್ಲ, ಅದು ಅವರ ಹೊಲದಲ್ಲಿ ಬೆಳೆದ ಮೆಣಸಿನಕಾಯಿ ಕೃಷಿ.
ನಾವು ಮೆಣಸಿನಕಾಯಿ ಕೃಷಿಯನ್ನು ಆರಂಭಿಸಿದಾಗ ಅದರಿಂದ ಸಿಗುತ್ತಿದ್ದ ಆದಾಯ ಬಹಳ ಕಡಿಮೆಯಿತ್ತು. ನಮ್ಮ ಕುಟುಂಬ ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿತ್ತು. ಆದರೆ ಮೆಣಸಿನಕಾಯಿ ಮಾರಾಟದಿಂದ ಬಂದ ಹಣವೇ ನಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಯಿತು ಎಂದು ರೈತ ಸುರೇಶ್ ಪ್ರಸಾದ್ ಹೆಮ್ಮೆಯಿಂದ ಹೇಳುತ್ತಾರೆ.
300 ಕುಟುಂಬಗಳ ಗ್ರಾಮದಲ್ಲಿ 300 ಸರ್ಕಾರಿ ನೌಕರರು!
ಬಿಹಾರದ ಗಯಾ ಜಿಲ್ಲೆಯ ಖಂಜಹಾನ್ಪುರ, ನಾನೋಕ್, ಭದೇಜಾ ಮತ್ತು ಸದಿಪುರ ಗ್ರಾಮಗಳು ರಾಜ್ಯದಲ್ಲೇ ಅತಿಹೆಚ್ಚು ಮೆಣಸಿನಕಾಯಿ ಬೆಳೆಯುವ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿ ಬೆಳೆಯುವ ಖಾರದ ಮೆಣಸಿನಕಾಯಿಗೆ ಬಿಹಾರದ ಸ್ಥಳೀಯ ಮಾರುಕಟ್ಟೆಗಳಲ್ಲದೆ, ನೆರೆಯ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಭಾರಿ ಬೇಡಿಕೆಯಿದೆ. ಮೆಣಸಿನಕಾಯಿ ಕೃಷಿಯಿಂದ ಆರ್ಥಿಕವಾಗಿ ಸಬಲರಾದ ಇಲ್ಲಿನ ರೈತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಪರಿಣಾಮವಾಗಿ ಇಂದು ಈ ಹಳ್ಳಿಗಳ ಮಕ್ಕಳು ವೈದ್ಯರು, ಎಂಜಿನಿಯರ್ಗಳು, ಶಿಕ್ಷಕರು ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಖಂಜಹಾನ್ಪುರದ ಹಿರಿಯ ರೈತ ಇಂದ್ರ ದೇವ್ ವಿದ್ರೋಹಿ ಅವರು ಈ ಗ್ರಾಮದ ಐತಿಹಾಸಿಕ ಮತ್ತು ಶೈಕ್ಷಣಿಕ ಕ್ರಾಂತಿಯ ಬಗ್ಗೆ ವಿವರಿಸುತ್ತಾ, ನಮ್ಮ ಊರು ಮೊಘಲ್ ಸಾಮ್ರಾಜ್ಯದ ಕಾಲಕ್ಕಿಂತಲೂ ಹಳೆಯದು. ಮೊಘಲರ ಕಾಲದಲ್ಲೇ ಇಲ್ಲಿ ಮೆಣಸಿನಕಾಯಿ ಕೃಷಿ ಆರಂಭವಾಗಿ, ಬ್ರಿಟಿಷರ ಆಳ್ವಿಕೆಯಲ್ಲಿ ವಿಸ್ತರಣೆಗೊಂಡಿತು. ಕಳೆದ 30-35 ವರ್ಷಗಳಲ್ಲಿ ಇಲ್ಲಿನ ಕೃಷಿ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಸುಮಾರು 300 ಕುಟುಂಬಗಳನ್ನು ಹೊಂದಿರುವ ನಮ್ಮ ಖಂಜಹಾನ್ಪುರ ಗ್ರಾಮದಲ್ಲಿ ಬರೋಬ್ಬರಿ 300 ಮಂದಿ ಸರ್ಕಾರಿ ಸೇವೆಯಲ್ಲಿದ್ದಾರೆ! ಎನ್ನುತ್ತಾರೆ.
ನನ್ನ ಮಗ ಎನ್ಟಿಪಿಸಿಯಲ್ಲಿ (NTPC) ಎಸ್ಡಿಒ ಆಗಿ ಕೆಲಸ ಮಾಡುತ್ತಿದ್ದಾನೆ. ಬಿಹಾರ ಆಡಳಿತ ಸೇವೆಯಲ್ಲಿ (BPSC) ಈ ಗ್ರಾಮದ 50ಕ್ಕೂ ಹೆಚ್ಚು ಯುವಕ-ಯುವತಿಯರು ಆಯ್ಕೆಯಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಸರ್ಕಾರಿ ಶಿಕ್ಷಕರಾಗಿದ್ದಾರೆ. 2015ರಿಂದೀಚೆಗೆ 75ಕ್ಕೂ ಹೆಚ್ಚು ಮಂದಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಯಲ್ಲೂ ವೈದ್ಯರು, ಎಂಜಿನಿಯರ್ಗಳು, ವಕೀಲರು ಅಥವಾ ಖಾಸಗಿ ವಲಯದಲ್ಲಿ ಉನ್ನತ ಹುದ್ದೆಯಲ್ಲಿರುವ ಒಬ್ಬರಾದರೂ ಇದ್ದಾರೆ ಎಂದು ಇಂದ್ರ ದೇವ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಮೆಣಸಿನಕಾಯಿ ಬೆಳೆಯೇ ರೈತರಿಗೆ ವರದಾನವಾಗಿದ್ದು ಏಕೆ?
ಇತರ ತರಕಾರಿ ಬೆಳೆಗಳಿಗೆ ಹೋಲಿಸಿದರೆ ಮೆಣಸಿನಕಾಯಿ ಬೆಳೆಯು ರೈತರಿಗೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕವಾಗಿದೆ ಎನ್ನುತ್ತಾರೆ ರೈತ ಸುರೇಶ್ ಪ್ರಸಾದ್.
ವ್ಯಾಪಾರಿಗಳು ನೇರವಾಗಿ ರೈತರ ಹೊಲಕ್ಕೇ ಬಂದು ಮೆಣಸಿನಕಾಯಿಯನ್ನು ಖರೀದಿಸುತ್ತಾರೆ, ಇದರಿಂದ ಸಾಗಾಟದ ವೆಚ್ಚ ಉಳಿಯುತ್ತದೆ.ಇತರ ತರಕಾರಿಗಳ ಪೂರೈಕೆ ಹೆಚ್ಚಾದಾಗ ಕೆಜಿಗೆ ₹50 ಇದ್ದ ಬೆಲೆ ₹1ಕ್ಕೆ ಕುಸಿಯುವ ಅಪಾಯವಿರುತ್ತದೆ. ಆದರೆ ಮೆಣಸಿನಕಾಯಿಯ ಬೆಲೆ ಕೆಜಿಗೆ ₹60 ಇದ್ದರೆ, ಅತಿಯಾದ ಇಳುವರಿ ಬಂದಾಗಲೂ ಕನಿಷ್ಠ ₹30 ರಿಂದ ₹40ಕ್ಕೆ ಮಾರಾಟವಾಗುತ್ತದೆ. ಹಸಿ ಮೆಣಸಿನಕಾಯಿಗೆ ಬೆಲೆ ಕಡಿಮೆ ಎನಿಸಿದರೆ, ರೈತರು ಅದನ್ನು ಒಣಗಿಸಿ (ಒಣ ಮೆಣಸಿನಕಾಯಿ) ದೀರ್ಘಕಾಲ ಸಂಗ್ರಹಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದು.
ವಾರ್ಷಿಕ ರೂ.12 ರಿಂದ ರೂ.15 ಕೋಟಿ ವಹಿವಾಟು!
ಭದೇಜಾ ಗ್ರಾಮದ ರೈತ ಕಮರುದ್ದೀನ್ ಅವರ ಪ್ರಕಾರ, ಭದೇಜಾ ಗ್ರಾಮವೊಂದರಲ್ಲೇ 20 ಎಕರೆಗೂ ಹೆಚ್ಚು ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಸುತ್ತಮುತ್ತಲಿನ ಐದಾರು ಹಳ್ಳಿಗಳನ್ನು ಸೇರಿಸಿದರೆ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಬೆಳೆಯಿದೆ. ಈ ಭಾಗದಲ್ಲಿ ಮೆಣಸಿನಕಾಯಿಯ ವಾರ್ಷಿಕ ವಹಿವಾಟು ರೂ.12 ಕೋಟಿಯಿಂದ ರೂ.15 ಕೋಟಿಯವರೆಗೆ ಇದೆ!
ಒಬ್ಬ ರೈತ ಸುಮಾರು ₹3,000 ಖರ್ಚು ಮಾಡಿ 100 ಕೆಜಿಗಿಂತ ಹೆಚ್ಚು ಇಳುವರಿ ಪಡೆಯಬಹುದು. ಇಲ್ಲಿ ಬೆಳೆಯುವ ಸ್ಥಳೀಯ ತಳಿಯ ಮೆಣಸಿನಕಾಯಿ ಹೈಬ್ರಿಡ್ ತಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅತ್ಯಂತ ಖಾರವಾಗಿರುತ್ತದೆ. ಹವಾಮಾನ ವೈಪರೀತ್ಯಗಳಿಂದ ಬೆಳೆಯನ್ನು ರಕ್ಷಿಸಿಕೊಂಡರೆ ಭರ್ಜರಿ ಲಾಭ ಖಚಿತ. ನಾನು 12 ಎಕರೆಗೂ ಹೆಚ್ಚು ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದು, ವಾರ್ಷಿಕ ರೂ.10 ಲಕ್ಷದವರೆಗೆ ಲಾಭ ಗಳಿಸುತ್ತಿದ್ದೇನೆ ಎಂದು ಕಮರುದ್ದೀನ್ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಕೃಷಿಯನ್ನು ನಷ್ಟದ ಉದ್ಯಮ ಎಂದು ಭಾವಿಸಿ ಹಳ್ಳಿ ತೊರೆಯುವ ಯುವಕರಿಗೆ, ಬಿಹಾರದ ಈ ಮೆಣಸಿನಕಾಯಿ ಗ್ರಾಮಗಳು ಹೊಸ ಭರವಸೆ ಮತ್ತು ಸ್ಫೂರ್ತಿಯ ಚಿಲುಮೆಯಾಗಿವೆ.
#SuccessStory #ChilliFarming #BiharFarmers #GayaNews #AgricultureSuccess #InspiringStory #RuralDevelopment #FarmersLife #UdayakalaNews #NationalNews #AgriBusiness #KannadaNews

