Menu

ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ನ ಅತ್ಯುನ್ನತ ಶೌರ್ಯ ಪ್ರಶಸ್ತಿ!

ಜೆರುಸಲೇಂ:  ಫ್ಲೈದುಬೈ (Flydubai) ವಿಮಾನದಲ್ಲಿದ್ದ 174 ಪ್ರಯಾಣಿಕರ ಹಾಗೂ ಸಿಬ್ಬಂದಿಯ ಜೀವ ಉಳಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ (Smit Machchhar) ಅವರ ಅಸಾಧಾರಣ ಸಾಹಸಕ್ಕೆ ಇಸ್ರೇಲ್ ಸರ್ಕಾರ ಗೌರವ ಸಲ್ಲಿಸಿದೆ. ಇಸ್ರೇಲ್‌ನ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘ಅಧ್ಯಕ್ಷೀಯ ಶೌರ್ಯ ಪ್ರಶಸ್ತಿ’ಯನ್ನು (Presidential Award For Heroism) ಘೋಷಿಸಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ (Isaac Herzog) ಆದೇಶ ಹೊರಡಿಸಿದ್ದಾರೆ.

ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿದ್ದಾಗ, ಓಮನ್ ಪ್ರಜೆಯಾದ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ ಎಂಬಾತ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದನು. ಈ ವೇಳೆ ಆರೋಪಿಯು ಕೊಡಲಿಯಿಂದ (ಕ್ರಾಶ್ ಆಕ್ಸ್) ನಡೆಸಿದ ಭೀಕರ ಹಲ್ಲೆಯಿಂದಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡು ವಿಪರೀತ ರಕ್ತಸ್ರಾವವಾಗುತ್ತಿದ್ದರೂ ಎದೆಗುಂದದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್, ಸಮಯಪ್ರಜ್ಞೆ ಮೆರೆದು ಕಾಕ್‌ಪಿಟ್‌ನ ಬಾಗಿಲನ್ನು ತೆರೆದರು. ಅವರ ಈ ಸಾಹಸದ ಕ್ರಮದಿಂದಾಗಿ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ಕೂಡಲೇ ಕಾಕ್‌ಪಿಟ್‌ಗೆ ನುಗ್ಗಿ, ಹಲ್ಲೆ ನಡೆಸಿದ ದುಷ್ಟನನ್ನು ಹತೋಟಿಗೆ ತರಲು ಸಾಧ್ಯವಾಯಿತು.

ಗುಣಮುಖರಾದ ಬಳಿಕ ಪ್ರಶಸ್ತಿ ಪ್ರದಾನ

ಸದ್ಯ ಗಾಯಗೊಂಡಿರುವ ಭಾರತೀಯ ಪೈಲಟ್ ಯುಎಇಯ (UAE) ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಅವರು ಸಂಪೂರ್ಣ ಗುಣಮುಖರಾದ ನಂತರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್ ತಿಳಿಸಿದ್ದಾರೆ.

ಇಸ್ರೇಲ್ ಅಧ್ಯಕ್ಷರ ಮೆಚ್ಚುಗೆ ನುಡಿ

ಈ ಕುರಿತು ಮಾತನಾಡಿರುವ ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್, “ನಾವು ಗೌರವಿಸುತ್ತಿರುವ ಇಸ್ರೇಲ್‌ನ ಹೀರೋ, ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಕ್ಯಾಪ್ಟನ್ ಮಚ್ಚಾರ್ ಅವರ ಅಸಾಧಾರಣ ಧೈರ್ಯ ಮತ್ತು ಅತ್ಯುತ್ತಮ ವೃತ್ತಿಪರತೆಯು ಒಂದು ದೊಡ್ಡ ದುರಂತವನ್ನು ತಪ್ಪಿಸಲು ನೆರವಾಯಿತು. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ಇಸ್ರೇಲ್ ಜನರ ಪರವಾಗಿ ಅವರಿಗೆ ‘ಇಸ್ರೇಲ್‌ನ ನಾಗರಿಕ ಶೌರ್ಯಕ್ಕಾಗಿ ನೀಡುವ ಅಧ್ಯಕ್ಷೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡುವುದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
#SmitMachchhar #Flydubai #IsraelAward #IndianPilot #PresidentialAwardForHeroism #UdayakalaNews #BreakingNews #HeroicPilot #IsraelNews

Related Posts

Leave a Reply

Your email address will not be published. Required fields are marked *