ಉದಯಕಾಲ ನ್ಯೂಸ್, ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ರಾಜಾನುಕುಂಟೆ ರೈಲ್ವೆ ಯಾರ್ಡ್ನಲ್ಲಿ ನಿಲ್ಲಿಸಿದ್ದ ರೈಲಿನ ಮೂರು ಬೋಗಿಗಳಿಗೆ ಹಠಾತ್ ಬೆಂಕಿ ತಗುಲಿರುವ ಆತಂಕಕಾರಿ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 10:30ರ ವೇಳೆಗೆ ಯಾರ್ಡ್ನಲ್ಲಿ ನಿಲ್ಲಿಸಲಾಗಿದ್ದ ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಪಡಿಸಿದ್ದಾರೆ.
ಮಾಕ್ ಡ್ರಿಲ್ಗಾಗಿ ಬಳಸುತ್ತಿದ್ದ ಬೋಗಿಗಳು
ಅಪಘಾತಕ್ಕೀಡಾದ ಈ ಮೂರು ಬೋಗಿಗಳನ್ನು ತುರ್ತು ಪರಿಸ್ಥಿತಿ ಹಾಗೂ ಮಾಕ್ ಡ್ರಿಲ್ಗಳ (Mock Drill) ತರಬೇತಿಗಾಗಿ ಬಳಸಲಾಗುತ್ತಿತ್ತು. ಕಳೆದ ಹಲವು ದಿನಗಳಿಂದ ಇವುಗಳನ್ನು ರಾಜಾನುಕುಂಟೆ ಯಾರ್ಡ್ನಲ್ಲಿ ನಿಲ್ಲಿಸಲಾಗಿತ್ತು. ವಿಶೇಷವೆಂದರೆ ಈ ಬೋಗಿಗಳು ರೈಲ್ವೆ ಹಳಿಯ ಮೇಲೆ ಇರಲಿಲ್ಲ ಮತ್ತು ಆ ಸಮಯದಲ್ಲಿ ಬೋಗಿಗಳ ಒಳಗೆ ಯಾರೂ ಇರಲಿಲ್ಲವಾದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.
ಬೆಂಕಿ ನಂದಿಸುವ ಕಾರ್ಯಚರಣೆ
ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಒಣಗಿದ ವಾತಾವರಣ ಹಾಗೂ ಇತರೆ ಕಾರಣಗಳಿಂದ ಕ್ಷಣಾರ್ಧದಲ್ಲಿ ವೇಗವಾಗಿ ವ್ಯಾಪಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಎರಡು ಕೋಚ್ಗಳು ಸಂಪೂರ್ಣವಾಗಿ ಸುಟ್ಟು ಕರಕಾಗಿದ್ದು, ತೀವ್ರ ಹಾನಿಗೀಡಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಸಿಬ್ಬಂದಿಗಳು ಹರಸಾಹಸಪಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅಧಿಕಾರಿಗಳ ಭೇಟಿ ಮತ್ತು ತನಿಖೆ
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಪರಿಸ್ಥಿತಿ ಅವಲೋಕಿಸಲು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಯಲಹಂಕ ಎಸ್ಎಂಆರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.
ಬೋಗಿಗಳಿಗೆ ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣವೇ ಅಥವಾ ಬೇರೆ ಏನಾದರೂ ದುಷ್ಕೃತ್ಯವಿದೆಯೇ ಎಂಬ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರದ ಮೇಲೂ ತಾಂತ್ರಿಕ ಪರಿಣಾಮ ಉಂಟಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
#Rajanukunte #FireAccident #BengaluruNews #RailwayYardFire #SouthWesternRailway #KarnatakaCrime #TrainFire #BengaluruRural #EmergencyAlert


