ಉದಯಕಾಲ ನ್ಯೂಸ್, ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಟಿವಿ, ಫ್ರಿಡ್ಜ್ ಹಾಗೂ ವಾಷಿಂಗ್ ಮಷೀನ್ ಅಸೆಂಬ್ಲಿ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಮಸ್ತೇನಹಳ್ಳಿ ಗ್ರಾಮದ ಕೆಐಎಡಿಬಿ (KIADB) ಕೈಗಾರಿಕಾ ಪ್ರದೇಶದಲ್ಲಿರುವ ‘ಗರುಡ ಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದೆ.
ಬೆಂಕಿಯ ಕೆನ್ನಾಲಿಗೆಗೆ ಬೆಂದ ಕಾರ್ಖಾನೆ
ಈ ಕಾರ್ಖಾನೆಯಲ್ಲಿ ಎಲ್ಇಡಿ ಟಿವಿ, ರೆಫ್ರಿಜರೇಟರ್ (ಫ್ರಿಡ್ಜ್) ಹಾಗೂ ವಾಷಿಂಗ್ ಮಷೀನ್ಗಳ ಅಸೆಂಬ್ಲಿ ಕಾರ್ಯ ನಡೆಯುತ್ತಿತ್ತು. ಅನಿರೀಕ್ಷಿತವಾಗಿ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಕಾರ್ಖಾನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ಉತ್ಪನ್ನಗಳು, ಬಿಡಿಭಾಗಗಳು ಹಾಗೂ ದುಬಾರಿ ಯಂತ್ರೋಪಕರಣಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಇದರಿಂದ ಒಟ್ಟಾರೆಯಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿರುವ ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಗಾಬಗೊಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಚಿಂತಾಮಣಿ ಹಾಗೂ ಶಿಡ್ಲಘಟ್ಟದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮಸ್ಥರು ಸೇರಿ ಹರಸಾಹಸಪಟ್ಟಿದ್ದಾರೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
#Chikkaballapura #Chintamani #FireAccident #FactoryFire #GarudaMart #KarnatakaNews #KIDBIndustrialArea #AccidentNews #BreakingNewsKannada


