Menu

ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹಲ್ಲೆಗೆ ವಿದ್ಯಾರ್ಥಿ ಬಲಿ: ಪೋಷಕರ ಆರೋಪ

ಬೆಂಗಳೂರು ನಗರ ಹೊರವಲಯದ ಕಾಡಯರಪ್ಪನಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮಗನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕರ ಹಲ್ಲೆ ಹಾಗೂ ಒತ್ತಡವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಯಲಹಂಕ ತಾಲೂಕಿನ ಸುಬೇದಾರ್ ಪಾಳ್ಯದ ಗುರುಕಿರಣ್ ಮೃತ ವಿದ್ಯಾರ್ಥಿ. ಕಾಡಯರಪ್ಪನಹಳ್ಳಿ ಬಳಿಯ ಸ್ಟರ್ಲಿಂಗ್ ಇಂಗ್ಲಿಷ್ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಜುಲೈ ಎಂಟರಂದು
ಬೆಲಗ್ಗೆ ಗುರುಕಿರಣ್‌ಗೆ ಆರೋಗ್ಯ ಸರಿಯಿಲ್ಲ ಎಂದು ಶಾಲೆಯ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿಸಿದ್ದಾರೆ. ಪೋಷಕರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಬೆಳಗ್ಗೆ ಜಾಗಿಂಗ್ ವೇಳೆ ಶೌಚಾಲಯಕ್ಕೆ ಹೋಗಿ ತಡವಾಗಿ ಬಂದಿದ್ದ ಗುರುಕಿರಣ್‌ಗೆ ದೈಹಿಕ ಶಿಕ್ಷಕ ನಾರಾಯಣ್ ಕತ್ತು ಬಗ್ಗಿಸಿ ಹೊಡೆದು ಹಲ್ಲೆ ನಡೆಸಿದ್ದಾನೆ. ಎರಡು ಸುತ್ತು ಓಡುವಂತೆ ಒತ್ತಾಯಿಸಿದ್ದಾರೆ. ಓಡಿ ಬಂದ ಕೆಲವೇ ಕ್ಷಣಗಳಲ್ಲಿ ಗುರುಕಿರಣ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.

ಶಾಲೆಯ ಎದುರು ಜಮಾಯಿಸಿದ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿ ವಾರ್ಡನ್‌ಗೆ ಹಿಗ್ಗಾಮುಗಾ ಥಳಿಸಿದ್ದಾರೆ. ದೈಹಿಕ ಶಿಕ್ಷಕ ನಾರಾಯಣ್‌ನನ್ನೂ ಪೊಲೀಸರ ವಶಕ್ಕೆ ಪಡೆಯಲು ಯತ್ನಿಸಿದಾಗ ಆತನ ಮೇಲೂ ಹಲ್ಲೆ ನಡೆಸಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಸಿಪಿ, ಎಸಿಪಿ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಯಿತು. ಮೃತ ಬಾಲಕನ ತಂದೆ ಪೊಲೀಸ್ ವಾಹನದ ಮುಂದೆ ಮಲ, ನನ್ನ ಮಗನನ್ನು ಹೊಡೆದು ಸಾಯಿಸಿದ್ದಾರೆ, ನ್ಯಾಯ ಬೇಕು ಎಂದು ಕಣ್ಣೀರಿಟ್ಟಿದ್ದಾರೆ.  ಬಾಲಕನ ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ತಿಳಿಯಬೇಕಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹೆಲ್ಮೆಟ್‌ನಿಂದ ಹೊಡೆದು ಪತ್ನಿಯ ಕೊಲೆ

ವ್ಯಕ್ತಿಯು ಪತ್ನಿಗೆ ಹೆಲ್ಮೆಟ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ಹೊರವಲಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ. ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಾಗರತ್ನ ಹಳೆಮನಿ (19) ಕೊಲೆಯಾದ ಮಹಿಳೆ. ಪತಿ ಶಿವರಾಜ್ ಕೊಲೆ ಆರೋಪಿ.

ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿ ದಂಪತಿ ತಾರಿಹಾಳ ಗ್ರಾಮದಲ್ಲಿ ವಾಸವಾಗಿದ್ದರು. ಗಂಡ-ಹೆಂಡತಿ ನಡುವೆ ವಾಗ್ವಾದ ಶುರುವಾಗಿ ತಾರಕಕ್ಕೇರಿದ್ದು, ಪತಿ ಶಿವರಾಜ್ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಎಸ್‌ಪಿ ಗುಂಜನ್ ಆರ್ಯ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *