Tuesday, November 24, 2026
Menu

ಅಧಿವೇಶನದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಪೋಲು: ತನಿಖೆಗೆ ಭೀಮಪ್ಪ ಗಡಾದ್ ಆಗ್ರಹ!

ಉದಯಕಾಲ ನ್ಯೂಸ್, ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿ ವರ್ಷ ನಡೆಸಲಾಗುವ ಚಳಿಗಾಲದ ಅಧಿವೇಶನವು ಜನರ ಸಮಸ್ಯೆ ಬಗೆಹರಿಸುವ ವೇದಿಕೆಯಾಗುವ ಬದಲು ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವ ಕೇಂದ್ರವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಅಧಿವೇಶನದ ವೇಳೆ ಹೋಟೆಲ್ ಕೊಠಡಿಗಳ ಹಂಚಿಕೆ, ಪೊಲೀಸರ ವಸತಿಗಾಗಿ ಜರ್ಮನ್ ಟೆಂಟ್ ನಿರ್ಮಾಣ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಬಾಡಿಗೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮತ್ತು ದುರ್ಬಳಕೆಯಾಗಿದೆ ಎಂದು ಮಾಹಿತಿ ಹಕ್ಕು (RTI) ಕಾರ್ಯಕರ್ತ ಭೀಮಪ್ಪ ಗಡಾದ್ ದಾಖಲೆಗಳ ಸಮೇತ ಗಂಭೀರ ಆರೋಪ ಮಾಡಿದ್ದಾರೆ.

ಸಚಿವರ ಆಪ್ತರು, ಶಾಸಕರ ಸಂಬಂಧಿಕರು ಹಾಗೂ ರೈತ ಮುಖಂಡರಿಗೆ ವಿಐಪಿ ರೂಮ್‌

2025ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸಚಿವರು ಮತ್ತು ಶಾಸಕರ ಹಿಂಬಾಲಕರು, ಸಂಬಂಧಿಕರು, ಆಪ್ತ ಸಹಾಯಕರು, ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸರ್ಕಾರದ ವೆಚ್ಚದಲ್ಲಿ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಹವಾನಿಯಂತ್ರಿತ ವಿಐಪಿ (VIP) ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಕಳೆದ ವರ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಾಗಲಕೋಟೆಯ ಹೊಳೆಬಸ್ಸು ಶೆಟ್ಟರ್ ಸೇರಿದಂತೆ ಹಲವು ಜನಪ್ರತಿನಿಧಿಗಳಲ್ಲದ ವ್ಯಕ್ತಿಗಳಿಗೆ ಸರ್ಕಾರಿ ಖರ್ಚಿನಲ್ಲಿ ಕೊಠಡಿಗಳನ್ನು ನೀಡಲಾಗಿದೆ. ಅಲ್ಲದೆ, ಬೆಳಗಾವಿ ಜಿಲ್ಲೆಯವರೇ ಆದ ಸಚಿವರು ಮತ್ತು ಶಾಸಕರಿಗೆ ನಗರದಲ್ಲಿ ಸ್ವಂತ ಮನೆಗಳಿದ್ದರೂ ಸಹ ಅವರಿಗೂ ಹೋಟೆಲ್ ಕೊಠಡಿಗಳನ್ನು ಮೀಸಲಿಡಲಾಗಿತ್ತು. *”ಜನಪ್ರತಿನಿಧಿಗಳಲ್ಲದವರಿಗೆ ಸರ್ಕಾರಿ ವೆಚ್ಚದಲ್ಲಿ ಕೊಠಡಿ ನೀಡಲು ಅನುಸರಿಸಿದ ಮಾನದಂಡಗಳೇನು? ಕೊಠಡಿ ಪಡೆದ ಶಾಸಕರು ನಿಜವಾಗಿಯೂ ಅಲ್ಲಿ ವಾಸ್ತವ್ಯ ಹೂಡಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು”* ಎಂದು ಅವರು ಆಗ್ರಹಿಸಿದ್ದಾರೆ.

ಪೊಲೀಸ್ ಟೆಂಟ್ ನಿರ್ಮಾಣಕ್ಕೆ ರೂ.4.74 ಕೋಟಿ ಹಾಗೂ 255 ವಿಐಪಿ ರೂಮ್‌ಗಳ ಬಾಡಿಗೆ!

ಭದ್ರತಾ ವ್ಯವಸ್ಥೆಯ ಹೆಸರಿನಲ್ಲಿ ಪೊಲೀಸ್ ಇಲಾಖೆಯ ವಸತಿಗಾಗಿ ಮಾಡಲಾದ ವೆಚ್ಚದ ಬಗ್ಗೆಯೂ ಭೀಮಪ್ಪ ಗಡಾದ್ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ:

2024ರ ಅಧಿವೇಶನದ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಸತಿಗಾಗಿ ಜಲನಿರೋಧಕ ಜರ್ಮನ್ ಟೆಂಟ್ ನಿರ್ಮಾಣಕ್ಕೆ ಬರೋಬ್ಬರಿ ₹4,74,14,642 (4.74 ಕೋಟಿ ರೂ.) ವೆಚ್ಚ ಮಾಡಲಾಗಿದೆ. 1,900 ಮತ್ತು 400 ಜನರ ವಸತಿ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ, ಸ್ವಚ್ಛತೆ, ತಾತ್ಕಾಲಿಕ ಆಸ್ಪತ್ರೆ, ಕುಡಿಯುವ ನೀರಿನ ಘಟಕ ಹಾಗೂ ಲಾಂಡ್ರಿ ಸೌಲಭ್ಯಗಳಿಗಾಗಿ ಇಷ್ಟೊಂದು ಬೃಹತ್ ಮೊತ್ತವನ್ನು ಖರ್ಚು ಮಾಡಿರುವುದರ ಅಗತ್ಯತೆ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಜರ್ಮನ್ ಟೆಂಟ್ ವ್ಯವಸ್ಥೆಯ ಜೊತೆಗೆ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ 255 ವಿಐಪಿ ಕೊಠಡಿಗಳನ್ನು ಪೊಲೀಸ್ ಇಲಾಖೆಗೆ ನೀಡಲಾಗಿತ್ತು. ಪ್ರತಿ ಕೊಠಡಿಯ ದಿನದ ಬಾಡಿಗೆ 5 ಸಾವಿರ ರೂಪಾಯಿಗೂ ಹೆಚ್ಚಿದೆ. ಆದರೆ ಈ ಕೊಠಡಿಗಳಲ್ಲಿ ವಾಸ್ತವ್ಯವಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರಗಳನ್ನು ನೀಡಲು ಪೊಲೀಸ್ ಇಲಾಖೆ ನಿರಾಕರಿಸುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಸಿಸಿ ಕ್ಯಾಮೆರಾ ಬಾಡಿಗೆಗೇ ₹4.25 ಕೋಟಿ ಪಾವತಿ

ಅಧಿವೇಶನದ ಭದ್ರತೆಗಾಗಿ ಅಳವಡಿಸಲಾಗುವ ಸಿಸಿಟಿವಿ ಕ್ಯಾಮೆರಾಗಳ ಬಾಡಿಗೆ ಹೆಸರಿನಲ್ಲಿ 2016ರಿಂದ 2025ರವರೆಗೆ ಒಟ್ಟು ₹4,25,07,295 (4.25 ಕೋಟಿ ರೂ.) ವೆಚ್ಚ ಮಾಡಲಾಗಿದೆ. ಇದರಲ್ಲಿ ಕೇವಲ 2024ರ ಅಧಿವೇಶನಕ್ಕೆ ₹91.89 ಲಕ್ಷ ಹಾಗೂ 2025ರ ಅಧಿವೇಶನಕ್ಕೆ ₹84.99 ಲಕ್ಷ ಬಾಡಿಗೆ ಪಾವತಿಸಲಾಗಿದೆ.

ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಬಾಡಿಗೆ ಪಾವತಿಸುವ ಬದಲು, ಸರ್ಕಾರವೇ ಶಾಶ್ವತವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿಸಿದ್ದರೆ ಆಗುತ್ತಿದ್ದ ವೆಚ್ಚವೆಷ್ಟು? ನಿಗದಿಪಡಿಸಿರುವ ಬಾಡಿಗೆ ದರ ಸಮಂಜಸವಾಗಿದೆಯೇ? ಖರೀದಿಗೆ ಬದಲಾಗಿ ಪ್ರತಿ ವರ್ಷ ಬಾಡಿಗೆ ವ್ಯವಸ್ಥೆಯನ್ನೇ ಮುಂದುವರಿಸಲು ಇರುವ ಮರ್ಮವೇನು? ಎಂದು ಭೀಮಪ್ಪ ಗಡಾದ್ ಖಾರವಾಗಿ ಪ್ರಶ್ನಿಸಿದ್ದಾರೆ.

ಪೀಠಾಧ್ಯಕ್ಷರಿಗೆ ಪತ್ರ: ಲೋಕಾಯುಕ್ತ ಹಾಗೂ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ

ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಈ ಎಲ್ಲಾ ಅವ್ಯವಹಾರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಭೀಮಪ್ಪ ಗಡಾದ್ ಅವರು ವಿಧಾನಸಭೆ ಸಭಾಧ್ಯಕ್ಷರು ಹಾಗೂ ವಿಧಾನಪರಿಷತ್ ಸಭಾಪತಿಗಳಿಗೆ ದಾಖಲೆಗಳ ಸಹಿತ ಪತ್ರ ಬರೆದಿದ್ದಾರೆ. ಒಂದು ವೇಳೆ ಸರ್ಕಾರ ಮತ್ತು ಪೀಠಾಧ್ಯಕ್ಷರು ಈ ಕುರಿತು ತನಿಖೆಗೆ ನಿರ್ದೇಶನ ನೀಡದಿದ್ದರೆ, ಲೋಕಾಯುಕ್ತರಿಗೆ (Lokayukta) ಅಧಿಕೃತ ದೂರು ಸಲ್ಲಿಸುವುದರ ಜೊತೆಗೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

#BelagaviSession #BheemappaGadad #RTIActivist #KarnatakaPolitics #PublicMoneyMisuse #SuvarnaVidhanaSoudha #BelagaviNews #WinterSession #Lokayukta #KarnatakaGovernment #UdayakalaNews #KannadaNews

Related Posts

Leave a Reply

Your email address will not be published. Required fields are marked *