Menu

SIR ಮತ್ತು ರಾಜಕೀಯ ಕೆಸರೆರಚಾಟ

ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅಧಿಕಾರಿಗಳು ಮತದಾರರಿಗೆ ತಿಳಿಸಬೇಕಿರುವ ಸಂಗತಿಗಳೇನು ? ಹೊಸ ಮತದಾರರ ಸೇರ್ಪಡೆ ನಿಯಮಾವಳಿಗಳೇನು? ಮನೆಮನೆಗೆ ಅಧಿಕಾರಿಗಳು ಬಂದಾಗ ಮೂಲಭೂತವಾಗಿ ಮತದಾರರು ಹೊಂದಿರಬೇಕಿರುವ ಕನಿಷ್ಟ ದಾಖಲೆಗಳೇನು? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಒದಗಿಸುವ ರೀತಿಯಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಿದೆ.

ರಾಜ್ಯದಲ್ಲಿ ಎಸ್ ಐ ಆರ್ ವಿಚಾರವೀಗ ರಾಜಕೀಯ ಜಗಳದ ಸರಕು ಆಗಿದೆ ! ಇದೊಂದು ಕಳವಳಕಾರಿ ಸಂಗತಿ. ಮಿಗಿಲಾಗಿ ಇವರಿಬ್ಬರ ಜಗಳ ಮತ್ತು ಕೆಸರೆರಚಾಟದಿಂದ ನೈಜ ಮತದಾರನ ಹಿತಾಸಕ್ತಿ ಮತ್ತು ಹಕ್ಕುಗಳಿಗೆ ಧಕ್ಕೆಯಾಗಿದೆ.

ರಾಜ್ಯದಲ್ಲಿ ಈಗ ಕೈಗೆತ್ತಿಕೊಳ್ಳಲಾದ ಎಸ್‌ಐ ಆರ್ ಪ್ರಕ್ರಿಯೆಯಲ್ಲಿ ಕೆಲವೊಂದು ಗಂಭೀರ ದೋಷಗಳು ಮತ್ತು ನ್ಯೂನತೆಗಳು ಕಂಡು ಬಂದಿವೆ. ಈ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರವನ್ನು ಚುನಾವಣೆ ಆಯೋಗ ನೀಡಬೇಕು. ಇದು ಆಯೋಗದ ಮೊದಲ ಹೊಣೆಗಾರಿಕೆ ಕೂಡಾ. ಇದೇ ವೇಳೆ ಎಸ್ ಐ ಆರ್ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಅವಲಂಬಿಸಿದೆ. ಇದನ್ನು ಸಾಬೀತು ಮಾಡಬೇಕಿರುವುದು ಕಾರ್ಯಾಂಗ . ಏಕೆಂದರೆ ದೇಶದಲ್ಲಿ ಚುನಾವಣೆ ಆಯೋಗವು ನಿರ್ವಹಿಸ ಬೇಕಿರುವ ಎಲ್ಲ ಮೂಲಭೂತ ಪ್ರಕ್ರಿಯೆಗಳನ್ನೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರೇ ನಿರ್ವಹಿಸಬೇಕಿರುವುದು ಅನಿವಾರ್ಯ.

ಮತದಾರರಿಗೆ ಗುರುತಿನ ಚೀಟಿ ಹಂಚುವಿಕೆ ಮತ್ತು ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಮತಪಟ್ಟಿ ಪರಿಷ್ಕರಣೆ _ ಈ ಕೆಲಸಗಳೆಲ್ಲವನ್ನೂ ಚುನಾವಣೆ ಆಯೋಗವು ಸರ್ಕಾರಿ ಅಧಿಕಾರಿಗಳ ಕೈಯಿಂದಲೇ ಮಾಡಿಸಬೇಕಷ್ಟೆ . ಬೇರೆ ದಾರಿಯಿಲ್ಲ. ಒಟ್ಟಿನಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಈ ದೇಶದ ಕಾನೂನು ಮತ್ತು ಸಂವಿಧಾನ ಪಾಲನೆ ಮುಖ್ಯವೇ ಹೊರತು ಬೇರೆ ಯಾವುದೇ ವಿಚಾರ ಇಲ್ಲಿ ಮುಖ್ಯವಾಗುವುದಿಲ್ಲ ಮತ್ತು ಅದು ಪರಿಗಣಿತವೂ ಆಗುವುದಿಲ್ಲ.

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಎಸ್ ಐ ಆರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂಬ ಆರೋಪಗಳಿವೆ. ಇದು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರಿಂದಲೂ ಈಗ ವ್ಯಕ್ತವಾಗಿದೆ. ಈ ಆರೋಪಗಳು ಮತ್ತು ಅಕ್ಷೇಪಗಳಿಗೆ ಮುಖ್ಯ ಚುನಾವಣಾಧಿಕಾರಿ ಅಂಬುಕುಮಾರ್ ಅವರೇ ಸಮಜಾಯಿಷಿ ನೀಡಬೇಕಿದೆ. ಈ ದಿಶೆಯಲ್ಲಿ ಸರ್ಕಾರದ್ದು ಸೀಮಿತ ಪಾತ್ರವಷ್ಟೆ. ಅಂಬುಕುಮಾರ್ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಓರ್ವ ಪಬ್ಲಿಕ್ ಸರ್ವೆಂಟ್ ಆದರೂ, ಚುನಾವಣೆ ಕಾರ್ಯ ನಿರ್ವಹಿಸುವಾಗ ಅವರೊಬ್ಬ ಸ್ವಾಯತ್ತ ಸಂಸ್ಥೆಯ ಪ್ರತಿನಿಧಿ ಮತ್ತು ಕ್ವಾಸಿ ಜುಡಿಷಿಯಲ್ ಅಧಿಕಾರಿ.ಈ ದಿಶೆಯಲ್ಲಿ ಅವರು ತೆಗೆದುಕೊಳ್ಳುವ ತೀರ್ಮಾನ ಮತ್ತು ನಿರ್ಣಯಗಳು ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿ ಮತ್ತು ನಿಯಮಾವಳಿಗಳ ಸುಪರ್ದಿಗೆ ಒಳಪಟ್ಟಿರುತ್ತೆ. ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಮತದಾರರಿಗೆ ತಿಳಿಸಬೇಕಿರುವ ಸಂಗತಿಗಳೇನು ? ಹೊಸ ಮತದಾರರ ಸೇರ್ಪಡೆ ನಿಯಮಾವಳಿಗಳೇನು? ಮನೆಮನೆಗೆ ಅಧಿಕಾರಿಗಳು ಬಂದಾಗ ಮೂಲಭೂತವಾಗಿ ಮತದಾರರು ಹೊಂದಿರಬೇಕಿರುವ ದಾಖಲೆಗಳೇನು ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಒದಗಿಸುವ ರೀತಿಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಿದೆ.

ಎಲ್ಲವೂ ಮೊಬೈಲ್ ಆಪ್‌ನಲ್ಲಿದೆ . ಅದರಲ್ಲಿ ಏನಿದೆಯೊ ಆ ಪ್ರಕಾರ ಡೀಟೆಲ್ಸ್ ತುಂಬಿ ಎಂದು ಹೇಳಿ ತಮ್ಮ ಡ್ಯೂಟಿಯಿಂದ ನುಣುಚಿಕೊಳ್ಳುವ ಬೇಜವಾಬ್ದಾರಿ ಅಧಿಕಾರಿಗಳನ್ನು ಮೊದಲು ಹದ್ದುಬಸ್ತಿನಲ್ಲಿಡಬೇಕಿದೆ. ಮನೆಮನೆಗೆ ಬರುವ ಅಧಿಕಾರಿಗಳ ಬಳಿಯೇ ಐಸ್‌ಐ ಆರ್‌ಗೆ ಸಂಬಂಧಿಸಿದ ಸೂಕ್ತ ಮಾಹಿತಿ ಇಲ್ಲ ಎಂದಾಗ ಎಸ್ ಐ ಆರ್ ಮೂಲ ಉದ್ದೇಶ ಹೇಗೆ ಈಡೇರಲು ಸಾಧ್ಯ? ಈ ದಿಶೆಯಲ್ಲಿ ಕರ್ನಾಟಕ ರಾಜ್ಯವು ಇನ್ನೊಂದು ಪ. ಬಂಗಾಳ ಆಗಬಾರದು. ಹೀಗಾದರೆ ಚುನಾವಣೆ ಆಯೋಗವೇ ಸಂಪೂರ್ಣ ವಿಫಲವಾದಂತೆ. ಎಲ್ಲಕ್ಕಿಂತ ಮಿಗಿಲಾಗಿ ಈ ದೇಶದ ನೈಜ ಮತ್ತು ಅಪ್ಪಟ ಮತದಾರನ ಬುಡಕ್ಕೆ ಕೈ ಹಾಕುವಂತಹ ಅನಾಹುತಕಾರಿ ಕೆಲಸವಾಗಬಾರದು.

Related Posts

Leave a Reply

Your email address will not be published. Required fields are marked *