Menu

ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ರಾಜ್ಯಗಳೇ ನಡೆಸಲಿ: ಸಿಎಂ ಸಿದ್ದರಾಮಯ್ಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಪ್ರಧಾನಿ,  ಕೇಂದ್ರ ಸಚಿವ ಪ್ರಧಾನ್ ಹೊಣೆಗಾರರು.  ಮೋದಿಯವರು ನೀಟ್ ವಿದ್ಯಾರ್ಥಿಗಳಿಗೆ ಬೇಷರತ್ ಕ್ಷಮೆ ಕೋರಬೇಕು. ಆಯಾ ರಾಜ್ಯಗಳಿಗೆ ವೈದ್ಯಕೀಯ ಕಾಲೇಜು ಪ್ರವೇಶ  ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು  ಸಿಎಂ ಸಿದ್ದರಾಮಯ್ಯ  ಆಗ್ರಹಿಸಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು. ನೀಟ್ ಪರೀಕ್ಷೆಯ ಪ್ರಶ್ನೆ ಸೋರಿಕೆಯಾಗಿದ್ದು, ಇದಕ್ಕೆ ಜವಾಬ್ದಾರರಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಾಗಲಿ ಅಥವಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾಗಲಿ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷೆಗೆ ಮತ್ತೊಂದು ದಿನಾಂಕ ನಿಗದಿ ಮಾಡಿ ಕೈ ತೊಳೆದುಕೊಂಡಿದ್ದು , ಈ ಜವಾಬ್ದಾರಿಯನ್ನು ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಹೊರಬೇಕು ಎಂದರು.

ಕರ್ನಾಟಕ ಮತ್ತಿತರೆ ರಾಜ್ಯಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವವರಿಗೆ ಸಿಇ ಟಿ ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತಿತ್ತು. ನರೇಂದ್ರ ಮೋದಿಯವರು 2014 ರಲ್ಲಿ ಪ್ರಧಾನಿಗಳಾದ ನಂತರ ಹಿಂದೆ ಇದ್ದ ಪದ್ಧತಿಯನ್ನು ಬದಲಾಯಿಸಿ 2016 ರಲ್ಲಿ ನೀಟ್ ಪರೀಕ್ಷೆಯನ್ನು ಜಾರಿಗೆ ತಂದರು. ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಒಂದು ವರ್ಷದಿಂದ ತಯಾರಿ ಮಾಡಿಕೊಂಡಿರುತ್ತಾರೆ. ಅನೇಕರು ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆಯಲು ಸಾವಿರಾರು ರೂ ವೆಚ್ಚ ಮಾಡಿರುತ್ತಾರೆ. ಹಣವಿದ್ದವರು ಕೋಚಿಂಗ್ ಪಡೆಯುತ್ತಾರೆ, ಹಣ ಇಲ್ಲದ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳು ಕೋಚಿಂಗ್ ಪಡೆಯಲಾಗುವುದಿಲ್ಲ ಎಂದು ಹೇಳಿದರು.

ಮೋದಿ ಸರ್ಕಾರ ಬಂದ ನಂತರ ಬೇಧಭಾವ ಉಂಟು ಮಾಡುತ್ತಿದ್ದಾರೆ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳ ಬಗ್ಗೆ ಅಲಕ್ಷ್ಯ ಮಾಡುತ್ತಿದ್ದಾರೆ ಎನ್ನಲು ಇದು ಸಾಕ್ಷಿ ಎಂದರು. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ವಿಷಯ. ಒಕ್ಕೂಟದ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು. ಅದು ಬಿಟ್ಟು ಕೇಂದ್ರೀಕರಿಸುವ ಕೆಲಸ ಮಾಡಬಾರದು ಎಂದರು.

ಕಳೆದ ಬಿಜೆಪಿ ಸರ್ಕಾರದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಇಂಜಿನಿಯರ್, ಸಬ್ ಇನ್ಸ್ಪೆಕ್ಟರ್ ನೇಮಕಾತಿ ಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಎಡಿಜಿಪಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಜೈಲಿಗೆ ಹೋಗಿರುವುದು ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ ನಡೆದಿರಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಪ್ರಶ್ನೆ ಪತ್ರಿಕೆ ಸೋರಿಕೆಗಳು ಬಹಳಷ್ಟು ನಡೆದಿವೆ. ಇದರ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿಯವರು ಹೊರಬೇಕಿದೆ. ಆದರೆ  ಇಟಲಿ ದೇಶಕ್ಕೆ ವಿದೇಶ ಪ್ರವಾಸದಲ್ಲಿದ್ದಾರೆ  ಎಂದು ಟೀಕಿಸಿದರು.

ದೇಶದ ಜನರಿಗೆ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಡೀಸೆಲ್ ಮಿತವ್ಯಯ ಮಾಡಿ, ವಿದೇಶ ಪ್ರವಾಸ ಮಾಡಬೇಡಿ ಎಂದು ಕರೆ ನೀಡಿ, ತಾವು ಮಾತ್ರ ಐದು ದೇಶಗಳ ವಿದೇಶಿ ಪ್ರವಾಸದಲ್ಲಿದ್ದಾರೆ. ದೇಶದಲ್ಲಿ 20 ರಿಂದ 29 ವಯೋಮಾನದ ಯುವಕ ಯುವತಿಯರಲ್ಲಿ ಶೇ. 67 ರಷ್ಟು ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಒದಗಿಸುವ ಮೂಲಕ ಕಳೆದ 12 ವರ್ಷಗಳ ಪ್ರಧಾನಿ ಮೋದಿಯವರ ಆಡಳಿತದಲ್ಲಿ 24 ಕೋಟಿ ಉದ್ಯೋಗಗಳು ಸೃಷ್ಠಿಯಾಗಬೇಕಿತ್ತು. ಆದರೆ ಈವರೆಗೆ 2 ಕೋಟಿಯಷ್ಟೂ ಉದ್ಯೋಗವನ್ನು ಕೊಡಲಾಗಲಿಲ್ಲ ಎಂದರು.

ದೇಶದಲ್ಲಿ 2016 ರಿಂದ ಇಲ್ಲಿಯವರೆಗೆ 5 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ.  ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್  ನೀಟ್ ಪರೀಕ್ಷೆಯನ್ನು ಮುಂದೂಡುವ ಜೊತೆಗೆ ರಾಜೀನಾಮೆಯನ್ನು ಹೊರಬೇಕು. ಆದರೆ ಬಿಜೆಪಿಯವರು ಭಂಡತನ ಪ್ರದರ್ಶಿಸಿ ರಾಜಿನಾಮೆ ಕೊಡಲು ಮನಸ್ಸು ಮಾಡುತ್ತಿಲ್ಲ. ಕೇಂದ್ರ ಶಿಕ್ಷಣ ಸಚಿವರು ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿತ್ತು. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದ ಪ್ರಕರಣದ ರೂವಾರಿಗಳನ್ನು ಕೊಲೆಗಾರರೆಂದು ಪರಿಗಣಿಸಿ ಶಿಕ್ಷೆ ನೀಡಬೇಕು. ಪ್ರಧಾನಿ ಮೋದಿ ತಮ್ಮ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ, ನೀಟ್ ಪರೀಕ್ಷೆ ಬರೆದ ಯುವಜನರ ಬೇಷರತ್ ಕ್ಷಮೆ ಯಾಚಿಸಬೇಕು ಎಂದರು.

Related Posts

Leave a Reply

Your email address will not be published. Required fields are marked *