ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕಾನೂನುಬಾಹಿರತೆ ಹಾಗೂ ಶಾಸನಬದ್ಧ ‘ಫಾರ್ಮ್ 6’ ಬದಲಾವಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಚುನಾವಣಾ ಆಯೋಗಕ್ಕೆ (ECI) ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಈ ವಿವಾದಿತ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕಟ್ಟುನಿಟ್ಟಿನ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠವು ಈ ವಿಚಾರಣೆ ನಡೆಸಿದ್ದು, ಮಾಧ್ಯಮ ವರದಿಗಳ ಆಧಾರದಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣಕ್ಕೆ ಅಮಾನತುಗೊಳಿಸಲು ಅಥವಾ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಏಕಪಕ್ಷೀಯ ತೀರ್ಮಾನಗಳ ಆರೋಪ
ಚುನಾವಣಾ ಆಯೋಗವು ಬಹು-ಸದಸ್ಯ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿ ಅಥವಾ ಒಮ್ಮತವಿಲ್ಲದೆ ಸಿಇಸಿ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ ಎಂದು ಅರ್ಜಿದಾರರು ಆಪಾದಿಸಿದ್ದಾರೆ.
ಈ ಕುರಿತು ವಿಚಾರಣೆ ವೇಳೆ ಗಂಭೀರವಾಗಿ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, “ದಾಖಲೆಗಳು ನ್ಯಾಯಾಲಯದ ಮುಂದೆ ಬಂದಾಗ, ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ಅನ್ನು ಯಾರು ಬದಲಾಯಿಸಿದರು ಎಂಬುದನ್ನು ನಾವು ಪರಿಶೀಲಿಸಲಿದ್ದೇವೆ. ಈ ತೀರ್ಮಾನಗಳನ್ನು ಕೇವಲ ಮುಖ್ಯ ಚುನಾವಣಾ ಆಯುಕ್ತರು ಒಬ್ಬರೇ ತೆಗೆದುಕೊಂಡಿದ್ದಾರೆಯೇ ಅಥವಾ ಆಯೋಗದ ಸರ್ವಾನುಮತ ಅಥವಾ ಬಹುಮತದಿಂದ ಅಂಗೀಕರಿಸಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ನೋಟಿಸ್ ನಂತರ, ನಿರ್ಧಾರಗಳನ್ನು ಒಮ್ಮತವಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದರೆ, ಅಂತಹ ನಿರ್ಧಾರಗಳನ್ನು ನ್ಯಾಯಾಲಯ ಹಿಂಪಡೆಯಲಿದೆ” ಎಂದು ಸ್ಪಷ್ಟಪಡಿಸಿದರು.
ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ವಾದ
ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ವಾದ ಮಂಡಿಸಿ, “ಇದು ರಾಷ್ಟ್ರೀಯ ಸಾಂವಿಧಾನಿಕ ಸಂಸ್ಥೆಯೊಂದರ ಕಾರ್ಯವೈಖರಿಗೆ ಸಂಬಂಧಿಸಿದ ಅತ್ಯಂತ ಗಂಭೀರ ಪ್ರಶ್ನೆಯಾಗಿದೆ. ನಾವು ಈ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನೋಡಿ ಬೆಳೆದಿದ್ದೇವೆ, ಆದರೆ ಪ್ರಸ್ತುತ ಅಂತಹ ವಾತಾವರಣ ಉಳಿದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು. ವಾದವನ್ನು ಆಲಿಸಿದ ಸಿಜೆಐ ಸೂರ್ಯಕಾಂತ್, “ನಾವು ಕೂಡ ನಮ್ಮ ಹೋಂವರ್ಕ್ ಮಾಡಿಕೊಂಡೇ ಬಂದಿದ್ದೇವೆ, ಪ್ರಕರಣದ ಆಳ ನಮಗೂ ತಿಳಿದಿದೆ” ಎಂದು ತಿಳಿಸಿದರು.
#SupremeCourt #ElectionCommission #Gyanesh Kumar #CJI_SuryaKant #Form6 #SIRProcess #UdayakalaNews #IndianPolitics #ElectionCommissionOfIndia #LawAndJustice


