ಮನೆಯಲ್ಲಿ ಎಸಿ ಸ್ಫೋಟಗೊಂಡು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಮೃತಪಟ್ಟಿದ್ದಾರೆ. ಅವರ ಮಗನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲ್ಲಿಯ ಹೌಜ್‌ಖಾಸ್‌ನಲ್ಲಿರುವ ಧನೇಂದ್ರ ಕುಮಾರ್ ಮನೆಯಲ್ಲಿ ಗುರುವಾರ ರಾತ್ರಿ ಈ ದುರಂತ ಸಂಭವಿಸಿದೆ. ಕುಟುಂಬ ಸದಸ್ಯರು ಮತ್ತು ಮನೆ ಕೆಲಸದವರು ಸೇರಿದಂತೆ ಒಟ್ಟು 5 ಜನ ಮನೆಯಲ್ಲಿದ್ದರು. ಮಾಹಿತಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಗಾಯಗೊಂಡಿದ್ದ ಧನೇಂದ್ರ ಕುಮಾರ್ ಮತ್ತು ಮಗನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಧನೇಂದ್ರ ಕುಮಾರ್ ಆಸ್ಪತ್ರೆಯಲ್ಲೇ ಅಸು ನೀಗಿದ್ದಾರೆ. ಅವರ ಮಗ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮನೆಯಲ್ಲಿ ಅಳವಡಿಸಿದ್ದ ಎಸಿ ಒಳಭಾಗದಲ್ಲಿ ಸ್ಫೋಟಗೊಂಡು ದಟ್ಟವಾಗಿ ಬೆಂಕಿ ಹೊತ್ತಿಕೊಂಡಿದೆ, ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಬಟ್ಟೆಗಳು, ಸೂಟ್‌ಕೇಸ್‌ಗಳು ಸುಟ್ಟು ಕರಕಲಾಗಿವೆ.


