ಉದಯಕಾಲ ನ್ಯೂಸ್, ತೆಲಂಗಾಣ: ಹಗಲಿರುಳು ಪರಿಶ್ರಮ ಪಡುವ ಗಿಗ್ ಕಾರ್ಮಿಕರ ಬಹುದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೈದರಾಬಾದ್ನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ‘ತೆಲಂಗಾಣ ಗಿಗ್ ವರ್ಕರ್ಸ್ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ’ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ರಾಜ್ಯದ ಆನ್ಲೈನ್ ಡೆಲಿವರಿ ಹಾಗೂ ರೈಡ್-ಹೇಲಿಂಗ್ ಕಾರ್ಮಿಕರ ಆರ್ಥಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಗಾಗಿ ಒಟ್ಟು 15 ಲಕ್ಷ ರೂ.ಗಳವರೆಗಿನ ವಿಮಾ ಸೌಲಭ್ಯವನ್ನು ಈ ವೇಳೆ ಘೋಷಿಸಲಾಗಿದ್ದು, ಅನ್ನದಾತರಂತೆ ಕಾರ್ಮಿಕರಿಗೂ ಸುರಕ್ಷತೆ ಒದಗಿಸುವ ಐತಿಹಾಸಿಕ ಹೆಜ್ಜೆಯನ್ನು ಕಾಂಗ್ರೆಸ್ ಸರ್ಕಾರ ಇಟ್ಟಿದೆ.
ರೂ.5 ಲಕ್ಷ ಅಪಘಾತ ವಿಮೆ ಹಾಗೂ ರೂ.10 ಲಕ್ಷ ಆರೋಗ್ಯ ವಿಮೆ!
ಹೊಸದಾಗಿ ಜಾರಿಗೆ ಬಂದಿರುವ ಈ ಕಲ್ಯಾಣ ಯೋಜನೆಯಡಿ ತೆಲಂಗಾಣದ ಪ್ರತಿಯೊಬ್ಬ ನೋಂದಾಯಿತ ಗಿಗ್ ಕಾರ್ಮಿಕನಿಗೆ ಒಟ್ಟು 15 ಲಕ್ಷ ರೂಪಾಯಿಗಳ ವಿಮಾ ರಕ್ಷಣೆ ದೊರೆಯಲಿದೆ. ಇದರಲ್ಲಿ 5 ಲಕ್ಷ ರೂ.ಗಳ ಅಪಘಾತ ವಿಮೆ ಹಾಗೂ 10 ಲಕ್ಷ ರೂ.ಗಳ ಆರೋಗ್ಯ ವಿಮೆ ಸೇರಿದೆ. ನಿರಂತರವಾಗಿ ರಸ್ತೆಯಲ್ಲಿ ಸಂಚರಿಸುತ್ತಾ ಕಷ್ಟಪಟ್ಟು ಕೆಲಸ ಮಾಡುವ ಡೆಲಿವರಿ ಬಾಯ್ಗಳು ಮತ್ತು ಕ್ಯಾಬ್ ಚಾಲಕರಿಗೆ ಅನಿರೀಕ್ಷಿತ ಅಪಘಾತಗಳು ಅಥವಾ ಗಂಭೀರ ಅನಾರೋಗ್ಯ ಸಂಭವಿಸಿದಾಗ ಇಡೀ ಕುಟುಂಬವು ಬೀದಿಗೆ ಬೀಳದಂತೆ ಈ ವಿಮೆ ಆರ್ಥಿಕ ಬೆಂಬಲ ನೀಡಲಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗಿಗ್ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಅವರ ಭವಿಷ್ಯಕ್ಕೆ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಪ್ರತಿ ವಹಿವಾಟಿನ ಶೇ.1ರಷ್ಟು ಹಣ ಸಂಗ್ರಹ ಹಾಗೂ ವಿಶ್ರಾಂತಿ ಕೇಂದ್ರಗಳ ನಿರ್ಮಾಣ
ಈ ಯೋಜನೆಯ ಅತ್ಯಂತ ವಿಶೇಷ ಅಂಶವೆಂದರೆ, ಡೆಲಿವರಿ ಮತ್ತು ರೈಡ್ ಸೇವೆ ನೀಡುವ ವಿವಿಧ ಕಂಪನಿಗಳು (ಉದಾಹರಣೆಗೆ ಉಬರ್, ಬ್ಲಿಂಕಿಟ್ ಇತ್ಯಾದಿ) ಪ್ರತಿ ವಹಿವಾಟಿನ ಮೌಲ್ಯದ ಶೇ. 1ರಷ್ಟು ಮೊತ್ತವನ್ನು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು. ಈ ನಿಧಿಯನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದರೊಂದಿಗೆ, ಕಾರ್ಮಿಕರು ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಹೈದರಾಬಾದ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯವಿರುವ ಹೈಟೆಕ್ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ನೇತೃತ್ವದ ತೆಲಂಗಾಣ ಸರ್ಕಾರವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಇದು ದೇಶಾದ್ಯಂತ ಮಾದರಿಯಾಗುವ ನಿರೀಕ್ಷೆಯಿದೆ.
#GigWorkers #RahulGandhi #TelanganaGovt #WelfareScheme #Udayakala #Insurance #RachanaReddy #WorkersRights


