ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಸಂಸದ್ ಚಲೊ ನಡೆಸಿದ ವಿದ್ಯಾರ್ಥಿಗಳು ಮತ್ತು ಸಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವೀಡಿಯೊಗಳನ್ನು ವೀಕ್ಷಿಸಲು ಸಮಯ ಇಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದೆ.
ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಮಾನವೀಯವಾಗಿ ನಡೆದುಕೊಂಡಿರುವ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ನಿರಾಕರಿಸಿದೆ.
ಅರ್ಜಿದಾರ ವಕೀಲರು ಪೊಲೀಸರ ಕೃತ್ಯವನ್ನು ಸಾಬೀತುಪಡಿಸಲು ವೀಡಿಯೊ ಸಾಕ್ಷ್ಯಗಳನ್ನು ಸಲ್ಲಿಸಲು ಮುಂದಾಗಿದ್ದು, ನಮ್ಮ ಸಮಯ ವ್ಯರ್ಥ ಮಾಡಬೇಡಿ, ನಿಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ. ನಮಗೆ ವೀಟಡಿಯೊ ನೋಡುವ ಆಸಕ್ತಿಯಿಲ್ಲ, ನಮ್ಮ ಬಳಿ ಸಮಯವೂ ಇಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಯಮಾಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಹೇಳಿದೆ.
ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಪೀಠವೂ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಕೋರ್ಟ್ ಅನ್ನು ಈ ವಿಷಯಗಳಿಗೆ ಎಳೆದು ತರಬೇಡಿ ಎಂದಿತ್ತು. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ದೆಹಲಿಯ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಮಂಡಿ ಹೌಸ್ ಸೇರಿದಂತೆ 16 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಮುಂದಿನ ಆದೇಶದವರೆಗೆ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಿರಲಾಗುತ್ತದೆ ದೆಹಲಿ ಮೆಟ್ರೋ ರೈಲು ನಿಗಮ ತಿಳಿಸಿದೆ. ಲೋಕ ಕಲ್ಯಾಣ ಮಾರ್ಗ, ರಾಜೀವ್ ಚೌಕ್, ಪಟೇಲ್ ಚೌಕ್, ರಾಮಕೃಷ್ಣ ಆಶ್ರಮ ಮಾರ್ಗ, ಬಾರಾಖಂಬಾ ರೋಡ್, ಸುಪ್ರೀಂ ಕೋರ್ಟ್, ಸೇವಾ ತೀರ್ಥ, ಜನಪಥ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯೇಟ್, ಐಟಿಒ, ದೆಹಲಿ ಗೇಟ್, ಇಂದ್ರಪ್ರಸ್ಥ, ಖಾನ್ ಮಾರ್ಕೆಟ್, ಜೋರ್ ಬಾಗ್, ಶಿವಾಜಿ ಸ್ಟೇಡಿಯಂ ಮೆಟ್ರೋಗಳು ಬಂದ್ ಆಗಿವೆ.


