ಪೋಕ್ಸೋ ಕಾಯ್ದೆಯಡಿ ಪ್ರಕರಣದ ತನಿಖೆ ವಿಳಂಬವಾದರೂ ಆರೋಪಿಗಳಿಗೆ ಶಾಸನಬದ್ಧ ಜಾಮೀನು ಲಭಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಿಎನ್‌ಎಸ್‌ಎಸ್ 193(2)ಅಡಿ ಈ ರಕ್ಷಣೆಗೆ ಆರೋಪಿಗಳು ಅರ್ಹರಲ್ಲ. ಅಪೂರ್ಣ ಚಾರ್ಜ್‌ಶೀಟ್ ಕೂಡ ಜಾಮೀನು ಪಡೆದುಕೊಳ್ಳಲು ಕಾರಣವಾಗುವುದಿಲ್ಲ.
ಪೋಕ್ಸೋ ಕಾನೂನು ಸಂತ್ರಸ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಇರುವುದೇ ಹೊರತು, ಆರೋಪಿಗಳಿಗೆ ಅನುಕೂಲ ಮಅಡಿಕೊಡುವುದಕ್ಕೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಇಂಥ ವಿಶೇಷ ಕಾನೂನುಗಳ ಅಡಿಯಲ್ಲಿನ ಕಾಲಮಿತಿಗಳು ಸಂತ್ರಸ್ತ ಕೇಂದ್ರಿತವಾಗಿವೆ. ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಇವೆ, ಆರೋಪಿಗಳು ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡಲು ಅಲ್ಲ. ಶಾಸನಬದ್ಧ ಜಾಮೀನು ಪಡೆಯಲು ಅರ್ಜಿದಾರರು ಬಿಎನ್‌ಎಸ್‌ಎಸ್ (BNSS) ನ ಕಲಂ 193(2) ರ ಸಹಾಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಎಫ್‌ಎಸ್‌ಎಲ್ ಅಥವಾ ಸಿಡಿಆರ್‌ನ ವರದಿಗಳಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸುವುದರಿಂದ ಕಾನೂನಿನ ದೃಷ್ಟಿಯಲ್ಲಿ ಅಂತಿಮ ವರದಿಯಾಗಿ ಆರೋಪಿಗೆ ಶಾಸನಬದ್ಧ ಜಾಮೀನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಅಂತಿಮ ವರದಿ ಸಲ್ಲಿಸಲು 60 ದಿನ ಮತ್ತು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ 90 ದಿನ ಕಾಲಮಿತಿ ಇರುವುದನ್ನು ಉಲ್ಲೇಖಿಸಿದ ನ್ಯಾಯಾಲಯವು, ಪ್ರಕರಣವೊಂದರಲ್ಲಿ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗಿರುವುದರಿಂದ ಮತ್ತು ಅದು ಅಪೂರ್ಣವಾಗಿದೆ ಎಂಬ ಅಂಶವು ಡಿಫಾಲ್ಟ್ ಜಾಮೀನು ಪಡೆಯಲು ಕಾರಣವಾಗದು. ಈ ಆಧಾರದ ಮೇಲೆ ಅರ್ಜಿದಾರರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಎರಡು ಸಂದರ್ಭಗಳಲ್ಲಿ ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ದೂರುದಾರರ ಮಗಳು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಆರೋಪಿಯು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಅಪ್ರಾಪ್ತ ವಯಸ್ಕಳೆಂದು ತಿಳಿದಿದ್ದರೂ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಆಕೆ ಅಕ್ಟೋಬರ್ 2025 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆರೋಪಿಯನ್ನು ಬಂಧಿಸಿ 2025 ರ ಅಕ್ಟೋಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.


