ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತತ್ತರಿಸಿದ್ದು, ರೈತರ ಬೆಳೆಗಳು ನಾಶವಾಗಿವೆ. ವಿದ್ಯುತ್ ಉತ್ಪಾದನೆ ಕುಸಿದಿದೆ. ನೀರಿನ ಅಭಾವ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಬರ ಪರಿಹಾರ ವಿಚಾರವಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳುವ ಬಗ್ಗೆ ಕೇಳಿದಾಗ, ಸರ್ವಪಕ್ಷ ನಿಯೋಗ ದೆಹಲಿಗೆ ಹೋಗಲಿದೆ, ಪ್ರಧಾನಮಂತ್ರಿಗಳ ಭೇಟಿಗೆ ಸಮಯಾವಕಾಶ ಕೇಳಿದ್ದು, ಉಪಮುಖ್ಯಮಂತ್ರಿಗಳು ಬರ ಪರಿಸ್ಥಿತಿಯ ಆಳವಾದ ಅಧ್ಯಯನ ಮಾಡಿದ್ದಾರೆ. ಈಗ ಮಧ್ಯಂತರ ಪರಿಹಾರ ನೀಡಿ, ನಂತರ ಬರ ಅಧ್ಯಯನ ಮಾಡಿ ಹೆಚ್ಚು ಪರಿಹಾರ ನೀಡಬೇಕು. ವಿರೋಧ ಪಕ್ಷಗಳ ನಾಯಕರು ಹಾಗೂ ಸಂಸದರು ನಮಗೆ ನೆರವು ನೀಡುವ ವಿಶ್ವಾಸವಿದೆ. ಕರ್ನಾಟಕಕ್ಕೆ ನೆರವು ನೀಡಬೇಕಾಗಿರುವುದು ಪ್ರಧಾನಮಂತ್ರಿಗಳ ಕರ್ತವ್ಯ ಎಂದರು.
ಬೇರೆ ರಾಜ್ಯಗಳು ಪ್ರತಿ ಯೂನಿಟ್ ಗೆ 20-22 ರೂ.ವರೆಗೆ ನೀಡಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ನಮ್ಮ ನಾಗರಿಕರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳುವಂತೆ ನಾವು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ಮಧ್ಯೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದು, ವಿದ್ಯುತ್ ಮಾರಾಟಕ್ಕೆ ನಿರ್ಬಂಧ ಹೇರಿ ಅವರು ವಿದ್ಯುತ್ ಅನ್ನು ಸರ್ಕಾರಕ್ಕೆ ನೀಡಬೇಕು ಎಂದು ಸೂಚಿಸಲಾಗುವುದು. ಸಾಧ್ಯವಿರುವ ಕಡೆ ಥರ್ಮಲ್ ಕೇಂದ್ರ ಸ್ಥಾಪನೆಗೆ ಸಾಧ್ಯತೆ ಹುಡುಕಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿಯ ಚೊಂಬು ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿಎಂ, ಆರ್ಥಿಕ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಆರ್ಥಿಕ ಇಲಾಖೆ ಎಚ್ಚರಿಕೆ ನೀಡುತ್ತದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೂ ಎಚ್ಚರಿಕೆ ನೀಡಿದ್ದು, ಬೇಕಾದರೆ ದಾಖಲೆ ಬಿಡುಗಡೆ ಮಾಡುತ್ತೇನೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಇದು ರಾಜಕೀಯ ಮಾಡುವಂತಹ ದೊಡ್ಡ ವಿಚಾರವಲ್ಲ. ಅವರಿಗೆ ನನ್ನ ರಾಜೀನಾಮೆ ಬೇಕಾದರೆ ತೆಗೆದುಕೊಳ್ಳಲಿ ಎಂದರು.
ಸತ್ತ ಆರ್ಥಿಕತೆ ಎಂದು ಬಿಜೆಪಿಯವರು ಶವಯಾತ್ರೆಗೆ ಮುಂದಾಗಿದ್ದಾರೆ ಎಂದು ಕೇಳಿದಾಗ, ಅವರು ಮಾಡಲಿ, ಅವರ ಸರ್ಕಾರದಲ್ಲಿ ನೀರಾವರಿ ಇಲಾಖೆಯಲ್ಲಿ ಇದ್ದ ಹಣವೆಷ್ಟು, ಅವರು ನೀಡಿದ ಕಾಮಗಾರಿಗಳೆಷ್ಟು ಎಂದು ಪಟ್ಟಿ ನೀಡಲೇ? ಟೀಕೆ ಮಾಡುವುದು ಬಹಳ ಸುಲಭ, ಅಧಿಕಾರದಲ್ಲಿದ್ದಾಗ ನಿಭಾಯಿಸುವುದು ಸವಾಲಿನ ವಿಚಾರ. ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ನಮಗೆ ಜನರ ಬದುಕಿನ ಬಗ್ಗೆ ಕಾಳಜಿ ಇದೆ. ನಾವು ಜಾತಿ, ಧರ್ಮದ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿದರು.


