Menu

ಆನ್‌ಲೈನ್‌ ಬೆಟ್ಟಿಂಗ್‌ ಚಟ: ಪತ್ನಿಯ ಇರಿದು ಕೊಂದು ಪತಿ ಆತ್ಮಹತ್ಯೆಗೆ ಯತ್ನ

ಬೆಂಗಳೂರಿನ ಮಹದೇವಪುರ ಪ್ರದೇಶದಲ್ಲಿ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆಯನ್ನು ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ದಾಸನಾಗಿದ್ದ ಪತಿಯೇ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಮಂಜುಳಾ ಕೊಲೆಯಾದ ಮಹಿಳೆ, ಆಕೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾದ್ದರು. ಮಂಜುಳಾ ಮತ್ತು ಪ್ರದೀಪ್ ಮದುವೆಯಾಗಿ 15 ವರ್ಷಗಳಾಗಿವೆ ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರದೀಪ್ ಆನ್‌ಲೈನ್ ಬೆಟ್ಟಿಂಗ್‌ ವ್ಯಸನಿಯಾಗಿದ್ದು, ಇದು ಆಗಾಗ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತಿತ್ತು. ಮಂಜುಳಾ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಆತ, ಮಕ್ಕಳ ತಂದೆ ಯಾರೆಂದು ಪ್ರಶ್ನಿಸುತ್ತಿದ್ದ. ಈ ಕಿರುಕುಳವನ್ನು ಸಹಿಸಲಾಗದೆ ಮಂಜುಳಾ ಒಂದೂವರೆ ತಿಂಗಳಿನಿಂದ ಮಕ್ಕಳೊಂದಿಗೆ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಪ್ರದೀಪ್ ಭಾನುವಾರ ಜಾಕೆಟ್ ಒಳಗೆ ಚಾಕು ಇಟ್ಟುಕೊಂಡು ಅತ್ತೆ ಮನೆಗೆ ಬಂದಿದ್ದಾನೆ. ತನ್ನನ್ನು ಕ್ಷಮಿಸಿ ಮನೆಗೆ ಹಿಂತಿರುಗುವಂತೆ ಪತ್ನಿಯಲ್ಲಿ ಬೇಡಿಕೊಂಡಿದ್ದಾನೆ. ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದ, ಇದ್ದಕ್ಕಿದ್ದಂತೆ ತಾಯಿ ಮತ್ತು ಇಬ್ಬರು ಮಕ್ಕಳ ಮುಂದೆ 20ಕ್ಕೂ ಹೆಚ್ಚು ಬಾರಿ ಮಂಜುಳಾಗೆ ಇರಿದಿದ್ದಾನೆ.

ಕೊಲೆಗೂಮೊದಲು ಪ್ರದೀಪ್ ಸಂದೇಶವೊಂದನ್ನು ವೀಡಿಯೊ ರೆಕಾರ್ಡ್ ಮಾಡಿದ್ದು, ತನ್ನ ಬೆಟ್ಟಿಂಗ್ ಚಟವು ತನ್ನ ಕುಟುಂಬವನ್ನು ಹಾಳು ಮಾಡಿದೆ. ನನ್ನ ಹೆಂಡತಿ ಇಲ್ಲದೆ ನಾನು ಇರಲು ಸಾಧ್ಯವಿಲ್ಲ. ಅವಳ ತಂದೆ ಮತ್ತು ಸೋದರ ಮಾವನೊಂದಿಗೆ ಮಾತನಾಡಿದ್ದೇನೆ. ಅವಳು ಸಂಜೆ ಕೆಲಸ ಮುಗಿಸಿ ಹಿಂತಿರುಗುತ್ತಾಳೆ. ನಾನು ಅವಳನ್ನು ನನ್ನ ಬಳಿಗೆ ಹಿಂತಿರುಗುವಂತೆ ಕೇಳುತ್ತೇನೆ. ಅವಳು ಬರುವುದಿಲ್ಲ ಎಂದು ಹೇಳಿದರೆ ಅವಳನ್ನು ಅಲ್ಲಿಯೇ ಕೊಲ್ಲುತ್ತೇನೆ ಎಂದು ಆ ವೀಡಿಯೊದಲ್ಲಿ ಹೇಳಿದ್ದಾನೆ.

ಪ್ರದೀಪ್ ಅದೇ ಚಾಕುವಿನಿಂದ ಕೈಯನ್ನು ಕತ್ತರಿಸಿಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಗುಟ್ಟಾಗಿ ಮದುವೆಯಾಗಿದ್ದ ಯುವತಿಗೆ ನಿಶ್ಚಿತಾರ್ಥ: ಕೊಲೆಗೈದ ಪತಿ

ಗುಟ್ಟಾಗಿ ಮದುವೆಯಾಗಿದ್ದ ಯುವತಿಯ ನಿಶ್ಚಿತಾರ್ಥ ವಿಚಾರ ತಿಳಿದು ಆಕ್ರೋಶಗೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

26 ವರ್ಷದ ಭವಾನಿ ಎಸ್ ಕೊಲೆಯಾದ ಯುವತಿ, ಆಕೆ ಮಾಗಡಿ ತಾಲೂಕಿನ ತುಳಸಿ ನಗರ ನಿವಾಸಿ. ತಿಗಳರಪಾಳ್ಯದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಬಿಲ್ಲಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಚಂದ್ರಶೇಖರ್ (33) ಆಟೋ ಚಾಲಕ.

ನಿಶ್ಚಿತಾರ್ಥ ನಿಗದಿಯಾಗಿದ್ದ ಭವಾನಿಯ ಅತ್ತೆ ಆಕೆಯ ತಾಯಿಗೆ ಕರೆ ಮಾಡಿ, ಭವಾನಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವಕನೊಬ್ಬನೊಂದಿಗೆ ಇರುವ ಫೋಟೋ ಬಗ್ಗೆ ಮಾಹಿತಿ ನೀಡಿದ್ದರು. ಅನುಮಾನಗೊಂಡ ತಂದೆ ಶ್ರೀನಿವಾಸ್ ಮಗಳಿಗೆ ಕರೆ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಮನೆ ಮಾಲೀಕರನ್ನು ಸಂಪರ್ಕಿಸಿ ವಿಚಾರಿಸಲು ಕೇಳಿದ್ದಾರೆ. ಮಾಲೀಕರು ಎಷ್ಟೇ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಪೊಲೀಸರು ಬಂದು ಪರಿಶೀಲಿಸಿದಾಗ ಮನೆಯೊಳಗೆ ಭವಾನಿ ಮೃತ ಪತ್ತೆಯಾಗಿದೆ. ಆರೋಪಿ ಚಂದ್ರಶೇಖರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಚಿಕಿತ್ಸೆ ಬಳಿಕ ಚಂದ್ರಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಚಂದ್ರಶೇಖರ್ ಮತ್ತು ಭವಾನಿ ವರ್ಷದ ಹಿಂದೆ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದು, ಒಟ್ಟಿಗೆ ವಾಸಿಸುತ್ತಿದ್ದರು. ಚಂದ್ರಶೇಖರ್‌ಗೆ ಈಗಾಗಲೇ ಮದುವೆಯಾಗಿದ್ದು, ಆರು ವರ್ಷದ ಮಗು ಕೂಡ ಇದೆ ಎಂಬ ವಿಚಾರ ಇತ್ತೀಚೆಗೆ ಭವಾನಿಗೆ ಗೊತ್ತಾಗಿದೆ.

ಪೋಷಕರು  ಭವಾನಿಗೆ ಮತ್ತೊಬ್ಬ ವರನನ್ನು ಹುಡುಕಿ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸುತ್ತಿದ್ದರು.  ವಿಚಾರ ತಿಳಿದ ಚಂದ್ರಶೇಖರ್ ಭವಾನಿಯ ಮನೆಗೆ ಬಂದಿದ್ದು, ಜಗಳವಾಡಿದ್ದಾನೆ. ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ. ಇಬ್ಬರೂ ಒಟ್ಟಿಗೆ ಬದುಕೋಣ ಅಥವಾ ಒಟ್ಟಿಗೆ ಸಾಯೋಣ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಬಳಿಕ ಚಂದ್ರಶೇಖರ್ ಅವರಿಬ್ಬರ ಮದುವೆಯ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಫೋಟೋ ಕಂಡ ಭವಾನಿಯ ಕುಟುಂಬದವರು ಆಕೆಯನ್ನು ಸಂಪರ್ಕಿಸಿದ್ದಾರೆ.  ಈ ವಿಷಯ  ಗೊತ್ತಾದ ಬಳಿಕ ಭವಾನಿ ಮತ್ತು ಚಂದ್ರಶೇಖರ್ ನಡುವೆ ಮತ್ತೆ ಜಗಳ ನಡೆದಿದ್ದು, ಆತ ಭವಾನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *