Menu

ಹಣಕ್ಕಾಗಿ ಪೋಷಕರಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಯುವಕ ಶವವಾಗಿ ಪತ್ತೆ

ಹಣಕ್ಕಾಗಿ ಪೋಷಕರೊಂದಿಗೆ ಜಗಳವಾಡಿದ ಯುವಕ ಬಳಿಕ ಮನೆ ಬಿಟ್ಟು ಹೋಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 27 ವರ್ಷದ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡವ.

ಕೆಲವು ದಿನಗಳಿಂದ ಪ್ರದೀಪ್ ಪೋಷಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ, ದುಡಿದು ಸಂಪಾದಿಸುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಸಂಘದಿಂದ ಸಾಲ ತೆಗೆದು ಕೊಡುವಂತೆ ಪ್ರದೀಪ್ ಒತ್ತಾಯಿಸಿದ್ದ, ಪೋಷಕರು ಒಪ್ಪದ್ದಕ್ಕೆ ಜಗಳವಾಡಿದ್ದ. ಬಳಿಕ ಸಿಟ್ಟಿನಿಂದ ಮನೆಯಿಂದ ಹೊರನಡೆದಿದ್ದು ನಾಪತ್ತೆಯಾಗಿದ್ದ.

ಗ್ರಾಮದ ಸಮೀಪದ ಕಾಫಿ ತೋಟದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರಿಯಾಲಿಟಿ ಶೋ ಕಲಾವಿದನ ಅನುಮಾನಾಸ್ಪದ ಸಾವು 

ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ರಿಯಾಲಿಟಿ ಶೋ ಕಲಾವಿದ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ‌ಯಲ್ಲಿ ವಾಸವಿದ್ದ ಸಿದ್ದಾರ್ಥ ಪರಶನೂರ (36) ಜೂನ್ 13 ರಂದು ಸ್ನೇಹಿತರೊಂದಿಗೆ ಮನೆಯಿಂದ ಹೋಗಿದ್ದು, ಶವವಾಗಿ ಪತ್ತೆಯಾಗಿದ್ದಾನೆ. ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಮೊಬೈಲ್ ಟವರ್ ಲೊಕೇಷನ್‌ ಆಧರಿಸಿ ಪೊಲೀಸರು ಪತ್ತೆಹಚ್ಚಿದ್ದು, ಸಾವಿಗೆ ನಿಖರ ಕಾರಣ‌ ತನಿಖೆಯಿಂದ ತಿಳಿದು ಬರಬೇಕಿದೆ.

Related Posts

Leave a Reply

Your email address will not be published. Required fields are marked *