ನೇಪಾಳವನ್ನು ಕಾಡಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಇನ್ಫೊಸಿಸ್ ಪಬ್ಲಿಕ್ ಸರ್ವಿಸಸ್‌ನ ಮುಖ್ಯಸ್ಥ ಲ್ಯಾಕ್ಸ್ ಗೋಪಿ ಸೆಟ್ಟಿ ಎಂಬವರು ನಾಪತ್ತೆಯಾಗಿದ್ದಾರೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನ್ಫೊಸಿಸ್ ಹೇಳಿದೆ.
ಐಟಿ ಸೇವಾ ಸಂಸ್ಥೆ ಇನ್ಫೊಸಿಸ್‌ನ ಅಂಗ ಸಂಸ್ಥೆ ಇನ್ಫೊಸಿಸ್ ಪಬ್ಲಿಕ್ ಸರ್ವಿಸಸ್ ಅಮೆರಿಕ ಮತ್ತು ಕೆನಡಾದ ಸಾರ್ವಜನಿಕ ವಲಯಕ್ಕೆ ಸೇವೆ ನೀಡುತ್ತದೆ. ಆ ವಿಭಾಗ ಮುಖ್ಯಸ್ಥ ಲ್ಯಾಕ್ಸ್ ಗೋಪಿ ಸೆಟ್ಟಿ ವೈಯಕ್ತಿಕ ಪ್ರವಾಸದ ಭಾಗವಾಗಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರ ಸುರಕ್ಷತೆ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.
ಗೋಪಿಸೆಟ್ಟಿ ಅವರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಂಬಂಧಿತ ಸಂಸ್ಥೆಗಳೊಂದಿಗೆ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ಗೋಪಿಸೆಟ್ಟಿ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸುತ್ತಿದೆ.
ನಾವು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲ ನೆರವನ್ನು ನೀಡುತ್ತಿದ್ದೇವೆ. ಲ್ಯಾಕ್ಸ್ ಮತ್ತು ಈ ದುರಂತದಿಂದ ಬಾಧಿತರಾದ ಎಲ್ಲರೊಂದಿಗೂ ನಾವಿದ್ದೇವೆ .ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಇದರಿಂದ ಉಂಟಾದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸುವುದಾಗಿ ಇನ್ಫೊಸಿಸ್ ಹೇಳಿದೆ.
ನೇಪಾಳ-ಟಿಬೆಟ್ ಗಡಿಯುದ್ದಕ್ಕೂ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ಕನಿಷ್ಠ 320 ಭಾರತೀಯರು ನಾಪತ್ತೆಯಾಗಿದ್ದು, 400 ಮಂದಿ ಚೀನಾದ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.


