ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ಜೂನ್ 21 ರಂದು ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ.
ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ತಡರಾತ್ರಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಸಿಬಿಐ ತನಿಖೆ ಚುರುಕುಗೊಂಡಿದ್ದು, ಎನ್ಟಿಎ ಒಳಗಿನವರ ಕೈವಾಡದ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.
ಸಚಿವ ಧರ್ಮೆಂದ್ರ ಪ್ರಧಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿದೆ. ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಎನ್ಟಿಎ ಮಹಾನಿರ್ದೇಶಕರು ಮತ್ತು ಸಿಬಿಎಸ್ಇ ಅಧ್ಯಕ್ಷರು ಪಾಲ್ಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇಬ್ಬರು ಶಂಕಿತರನ್ನು ಬಂಧಿಸಿದೆ. ಇದೊಂದು ಸಂಘಟಿತ ಗ್ಯಾಂಗ್ ನಡೆಸುತ್ತಿರುವ ದಂಧೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ರಾಜಸ್ಥಾನದ ಸೀಕರ್ ಜಿಲ್ಲೆಯ ಕೋಚಿಂಗ್ ಸೆಂಟರ್ಗಳಿಗೆ ಈ ಸೋರಿಕೆಯಾದ ಪತ್ರಿಕೆ ತಲುಪಿದ್ದು, ಪ್ರತಿ ವಿದ್ಯಾರ್ಥಿಯಿಂದ 2 ರಿಂದ 5 ಲಕ್ಷ ರೂ. ಪಡೆಯಲಾಗಿದೆ ಎಂಬ ಮಾಹಿತಿ ಲಭಿಸಿದೆ.
ದೆಹಲಿ, ಅಹಮದಾಬಾದ್ ಸೇರಿದಂತೆ ಹಲವು ಕಡೆ ವಿದ್ಯಾರ್ಥಿ ಸಂಘಟನೆಗಳು ಎನ್ಟಿಎ ರದ್ದು ಮತ್ತು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬ ಪರೀಕ್ಷೆ ರದ್ದಾದ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಸತಿ ವೈದ್ಯರ ಸಂಘದ ಒಕ್ಕೂಟ ಪ್ರಧಾನಿಗೆ ಪತ್ರ ಬರೆದಿದ್ದು, ನೀಟ್ ಪರೀಕ್ಷೆಯನ್ನು ಪೆನ್-ಪೇಪರ್ ಬದಲಿಗೆ ಐಐಟಿ-ಜೆಇಇ ಮಾದರಿಯಲ್ಲಿ ಕಂಪ್ಯೂಟರ್ ಆಧಾರಿತವಾಗಿ ನಡೆಸುವಂತೆ ಒತ್ತಾಯಿಸಿದೆ.


