ಉದಯಕಾಲ ನ್ಯೂಸ್, ಬೆಂಗಳೂರು: ಕನ್ನಡ ಚಿತ್ರರಂಗದ ನಟಸಾರ್ವಭೌಮ ದಿವಂಗತ ಡಾ. ರಾಜ್ಕುಮಾರ್ ಅವರ ಕಿರಿಯ ಪುತ್ರ, ಕನ್ನಡಿಗರ ಆರಾಧ್ಯ ದೈವ, ‘ಅಪ್ಪು’ ಎಂದೇ ಖ್ಯಾತರಾಗಿರುವ ಪುನೀತ್ ರಾಜ್ಕುಮಾರ್ ಅವರ 5ನೇ ಪುಣ್ಯಸ್ಮರಣೆ ಇಂದು ಆಚರಿಸಲಾಗುತ್ತಿದೆ. ಅಕ್ಟೋಬರ್ 29, 2021ರಂದು ಹೃದಯಾಘಾತದಿಂದ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿದ ಆ ಕಹಿ ದಿನವನ್ನು ಕರುನಾಡು ಎಂದಿಗೂ ಮರೆಯಲಾರದು. ಕಿರಿವಯಸ್ಸಿನಲ್ಲೇ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ ನಗುಮೊಗದ ಒಡೆಯ ತಮ್ಮ ಅದ್ಭುತ ನಟನೆ ಹಾಗೂ ಅದೋಗ್ಯ ಸಮಾಜ ಸೇವೆಯಿಂದಾಗಿ ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ನೆಲೆಸಿದ್ದಾರೆ.
ಅಪ್ಪು ಅವರ 5ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಾಡಿನ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೆಚ್ಚಿನ ನಟನಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ನಮನ
ಪುನೀತ್ ರಾಜ್ಕುಮಾರ್ ಅವರ ಸರಳತೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ”ಬಲಗೈಗೆ ತಿಳಿಯದಂತೆ ಎಡಗೈಯಿಂದ ದಾನ ಮಾಡಿದ, ನಿಸ್ವಾರ್ಥ ಸಮಾಜ ಸೇವೆ ಮಾಡಿದ ನಿಜವಾದ ಹೃದಯವಂತ ಲೋಕೋಪಕಾರಿ. ತಮ್ಮ ಸರಳತೆ ಮತ್ತು ನಟನೆಯ ಜೊತೆಗೆ ಮಾನವೀಯತೆಯಿಂದ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದ ಪರಮಾತ್ಮ ಡಾ.ಪುನೀತ್ ರಾಜ್ಕುಮಾರ್. ನೀವು ನಮ್ಮನ್ನು ಅಗಲಿ 5 ವರ್ಷಗಳ ನಂತರವೂ, ನಿಮ್ಮ ನೆನಪುಗಳು ನಮ್ಮ ಹೃದಯ ಬಡಿತಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ” ಎಂದು ಬರೆದುಕೊಂಡು ಕಣ್ಣೀರ ನಮನ ಸಲ್ಲಿಸಿದ್ದಾರೆ.
ಪ್ರಮುಖ ರಾಜಕೀಯ ನಾಯಕರಿಂದ ಶ್ರದ್ಧಾಂಜಲಿ
”ವರ್ಷಗಳು ಉರುಳಿದರೂ, ನಮ್ಮ ಪುನೀತ್ ರಾಜ್ಕುಮಾರ್ ಲಕ್ಷಾಂತರ ಹೃದಯಗಳಲ್ಲಿ ಕಳಂಕವಿಲ್ಲದ ಪ್ರೀತಿಯಾಗಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ವ್ಯಕ್ತಿತ್ವ, ಸೌಮ್ಯ ಸರಳತೆ ಮತ್ತು ಸಮಾಜಮುಖಿ ಸೇವೆ ಅಪ್ಪು ಅವರನ್ನು ಅಮರಗೊಳಿಸಿದೆ”ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಮರಿಸಿದ್ದಾರೆ.
”ನಗುಮೊಗದ, ಸರಳ ಸಜ್ಜನ ಮತ್ತು ಅದ್ಭುತ ನಟ ಪುನೀತ್ ರಾಜ್ಕುಮಾರ್ ಅವರ ಪವಿತ್ರ ಸ್ಮರಣಾರ್ಥ ದಿನದಂದು ಪ್ರೀತಿಯ ನಮನಗಳು. ಅವರು ಮಾನವೀಯತೆ ಮತ್ತು ಸೇವೆಯ ಮೌಲ್ಯಗಳಿಗೆ ಸದಾ ಮಾದರಿಯಾಗಿದ್ದರು” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಂಸದ ಬಸವರಾಜ್ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಕನ್ನಡಿಗರ ಹೆಮ್ಮೆಯ ‘ಕರ್ನಾಟಕ ರತ್ನ’ ಅಪ್ಪು ಅವರ ಕಲಾ ಸೇವೆ ಮತ್ತು ಸಾರ್ವಜನಿಕ ಸೇವೆಗಳನ್ನು ಸ್ಮರಿಸಿ, ಅವರು ಎಂದೆಂದಿಗೂ ಕನ್ನಡಿಗರ ಹೃದಯದಲ್ಲಿ ಚಿರಂಜೀವಿ ಎಂದು ಬಣ್ಣಿಸಿದ್ದಾರೆ.
#PuneethRajkumar #Appu5thDeathAnniversary #KarnatakaRatna #CMDKShivakumar #HDKumaraswamy #Siddaramaiah #Sandalwood #UdayakalaNews #KannadaNews


