Thursday, October 29, 2026
Menu

ಪ್ರಜಾಪ್ರಭುತ್ವ ರಕ್ಷಣೆಗಾಗಿ ನವೆಂಬರ್ 1ರ ಬೃಹತ್‌ ಪ್ರತಿಭಟನೆಗೆ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದ ರಾಹುಲ್ ಗಾಂಧಿ

ಉದಯಕಾಲ ನ್ಯೂಸ್, ನವದೆಹಲಿ: ಮತ ಕಳವು ಹಾಗೂ ಚುನಾವಣಾ ಅಕ್ರಮಗಳ ಗಂಭೀರ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ (INDIA) ಒಕ್ಕೂಟವು, ಚುನಾವಣಾ ಆಯೋಗದ ಧೋರಣೆಯನ್ನು ಖಂಡಿಸಿ ನವೆಂಬರ್ 1ರಂದು ಬೃಹತ್ ‘ಚಲೋ ದೆಹಲಿ ರಾಮ್‌ಲೀಲಾ ಮೈದಾನ’ ಮೆರವಣಿಗೆಗೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಐತಿಹಾಸಿಕ ರ‍್ಯಾಲಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು, ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಶೇಷ ವಿಡಿಯೋ ಸಂದೇಶದ ಮೂಲಕ ಕರೆಯಿತ್ತಿದ್ದಾರೆ.

ಈ ಪ್ರತಿಭಟನಾ ಮೆರವಣಿಗೆಯು ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅಥವಾ ಸಂಘಟನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಇದು ದೇಶದ ಜನರನ್ನು, ಸಂವಿಧಾನವನ್ನು ಹಾಗೂ ಭಾರತದ ನಿಜವಾದ ಆತ್ಮವನ್ನು ಪ್ರತಿನಿಧಿಸುವ ಬೃಹತ್ ಚಳವಳಿಯಾಗಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಭುತ್ವದ ಉಳಿವಿಗೆ ಎಲ್ಲರೂ ಒಂದಾಗಿ

ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಪ್ರಜಾಪ್ರಭುತ್ವದ ಪ್ರಸ್ತುತ ಸ್ಥಿತಿಗತಿ ಹಾಗೂ ಸಾಂವಿಧಾನಿಕ ಹಕ್ಕುಗಳ ಹರಣದ ಬಗ್ಗೆ ಕಳವಳ ಹೊಂದಿರುವ ಪ್ರತಿಯೊಬ್ಬರೂ ಈ ರ‍್ಯಾಲಿಯಲ್ಲಿ ಭಾಗಿಯಾಗಬೇಕು ಎಂದು ಕೋರಿದ್ದಾರೆ. ಪ್ರಸ್ತುತ ವ್ಯವಸ್ಥೆಯಿಂದ ಬೇಸತ್ತಿರುವ ಹಾಗೂ ಸಂವಿಧಾನವನ್ನು ರಕ್ಷಿಸಲು ಬಯಸುವ ಎಲ್ಲ ವರ್ಗದ ಜನತೆ ಪಕ್ಷಭೇದ ಮರೆತು ದೆಹಲಿಗೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ಮೇಲೆ ಪೊಲೀಸ್ ಕ್ರಮ ನಡೆಯಬಹುದು ಎಂಬ ಆತಂಕಗೊಂಡಿರುವ ಜನರಿಗೆ ಧೈರ್ಯ ತುಂಬಿರುವ ರಾಹುಲ್ ಗಾಂಧಿ, “ಪೊಲೀಸರ ಲಾಠಿಚಾರ್ಜ್‌ಗೆ ಯಾರೂ ಹೆದರಬೇಕಿಲ್ಲ. ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಜರುಗಿಸುವ ಧೈರ್ಯ ಬಿಜೆಪಿ ಸರ್ಕಾರಕ್ಕಿಲ್ಲ. ಧೈರ್ಯವಾಗಿ ನಮ್ಮೊಂದಿಗೆ ಮೆರವಣಿಗೆಗೆ ಬನ್ನಿ, ಸಂವಿಧಾನವನ್ನು ಮತ್ತು ನಮ್ಮ ದೇಶವನ್ನು ಒಟ್ಟಾಗಿ ರಕ್ಷಿಸೋಣ” ಎಂದು ಅಭಯ ನೀಡಿದ್ದಾರೆ.

ವಿದ್ಯಾರ್ಥಿ ಯುವಜನರಿಗೆ ವಿಶೇಷ ಆಹ್ವಾನ

ದೇಶದ ವಿದ್ಯಾರ್ಥಿ ಸಂಘಟನೆಗಳು ಹಾಗೂ ಯುವಜನರಿಗೆ ವಿಶೇಷವಾಗಿ ಮನವಿ ಮಾಡಿರುವ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟಿರುವ ಮತ್ತು ಸ್ವತಂತ್ರ ಆಲೋಚನೆಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಭಾವಿಸುವ ಯುವಕರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಭವಿಷ್ಯದ ಪ್ರಶ್ನೆಯಾಗಿದ್ದು, ಎಲ್ಲರೂ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

#RahulGandhi #ChaloDelhi #RamlilaMaidan #IndiaAlliance #ElectionCommission #SaveConstitution #IndianDemocracy #UdayakalaNews #NationalNews

Related Posts

Leave a Reply

Your email address will not be published. Required fields are marked *