ಉದಯಕಾಲ ನ್ಯೂಸ್, ನವದೆಹಲಿ: ದೆಹಲಿಯ ಬಿಕಾನೇರ್ ಹೌಸ್ನಲ್ಲಿ ಆಯೋಜಿಸಲಾಗಿದ್ದ ಯುವ ಕಲಾವಿದ ಹಾಗೂ ಫೋಟೋಗ್ರಾಫರ್ ರೈಹಾನ್ ವಾದ್ರಾ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಲ್ಲಿ ದಿಢೀರ್ ವಿವಾದ ಸೃಷ್ಟಿಯಾಗಿದೆ. ಪ್ರದರ್ಶನದಲ್ಲಿದ್ದ ಪ್ರತಿಭಟನೆಗಳ ಛಾಯಾಚಿತ್ರಗಳನ್ನು ತೆರವುಗೊಳಿಸುವಂತೆ ಆಡಳಿತ ಮಂಡಳಿ ಒತ್ತಡ ಹೇರಿದೆ ಎಂದು ರೈಹಾನ್ ಗಂಭೀರ ಆರೋಪ ಮಾಡಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ತಮ್ಮ ಮಗನ ಬೆಂಬಲಕ್ಕೆ ನಿಂತು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ಎಕ್ಸ್ (X) ಸಂದೇಶ
ಮಗನ ಬೆಂಬಲಕ್ಕೆ ನಿಂತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ ಗಾಂಧಿ, “ನನ್ನ ಮಗನ ಬಗ್ಗೆ ನನಗೆ ಯಾವಾಗಲೂ ಹೆಮ್ಮೆ ಇದೆ. ನೀನು ಸತ್ಯದ ಪರವಾಗಿ ನಿಲ್ಲು, ಆಗ ಸುಂದರವಾದದ್ದೆಲ್ಲವೂ ನಿನ್ನನ್ನು ಹುಡುಕಿಕೊಂಡು ಬರುತ್ತದೆ”ಎಂದಿದ್ದಾರೆ.
ಮುಂದುವರಿದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ಮತ್ತೊಬ್ಬರ ಅಭಿವ್ಯಕ್ತಿಗೆ ಹೆದರಿದಾಗ, ತಾವು ರಕ್ಷಿಸಲು ಪ್ರಯತ್ನಿಸುತ್ತಿರುವ ಅಧಿಕಾರವನ್ನು ಈಗಾಗಲೇ ಕಳೆದುಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ ಎಂದು ಟೀಕಿಸಿದ್ದಾರೆ. ಹಾರ್ಟ್ ಎಮೋಜಿಯೊಂದಿಗೆ ಮಗನ ಹೋರಾಟಕ್ಕೆ ತಾಯಿಯಾಗಿ ಸಾಥ್ ನೀಡಿದ್ದಾರೆ.
ಏನಿದು ‘ನೋ ಐಡಿಯಾ ಇಸ್ ಫೈನಲ್’ ಪ್ರದರ್ಶನ ವಿವಾದ?
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಅವರು ನವದೆಹಲಿಯ ಬಿಕಾನೇರ್ ಹೌಸ್ನಲ್ಲಿ ‘ನೋ ಐಡಿಯಾ ಇಸ್ ಫೈನಲ್’ ಎಂಬ ಶೀರ್ಷಿಕೆಯಡಿ ಕಲಾ ಹಾಗೂ ಫೋಟೋ ಪ್ರದರ್ಶನ ಹಮ್ಮಿಕೊಂಡಿದ್ದರು. ಆದರೆ, ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗುವ ಕೆಲವೇ ಗಂಟೆಗಳ ಮುನ್ನ ಅಂದರೆ ಬುಧವಾರ ಮಧ್ಯಾಹ್ನ ಆಡಳಿತ ಮಂಡಳಿಯಿಂದ ಆಕ್ಷೇಪ ವ್ಯಕ್ತವಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿಯಲ್ಲಿ ನಡೆದ ಯುವ ಪ್ರತಿಭಟನೆಗಳ ಛಾಯಾಚಿತ್ರಗಳನ್ನು ಪ್ರದರ್ಶನದಿಂದ ತೆಗೆದುಹಾಕುವಂತೆ ಆಡಳಿತ ಮಂಡಳಿ ಸೂಚಿಸಿತು ಎಂದು ರೈಹಾನ್ ತಿಳಿಸಿದ್ದಾರೆ. ಸಂಜೆ 5 ಗಂಟೆಯೊಳಗೆ ಚಿತ್ರಗಳನ್ನು ತೆಗೆಯದಿದ್ದರೆ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಮುಂಚಿತವಾಗಿಯೇ ಪ್ರಸ್ತಾವನೆ ಮತ್ತು ವಿನ್ಯಾಸವನ್ನು ನೀಡಿದ್ದರೂ ಕೊನೆಕ್ಷಣದಲ್ಲಿ ಕೃತಿಗಳಿಗೆ ಸೆನ್ಸಾರ್ ವಿಧಿಸಿರುವುದು ಖಂಡನೀಯ ಎಂದಿರುವ ರೈಹಾನ್, ರಾಷ್ಟ್ರಧ್ವಜ ಇರುವ ಫೋಟೋಗಳನ್ನು ಕೂಡ ತೆಗೆಯಲು ಸೂಚಿಸಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಲಾವಿದರ ಕೃತಿಗಳ ದಮನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕುವಿಕೆ ಕುರಿತಂತೆ ರಾಜಕೀಯ ವಲಯದಲ್ಲಿ ಹಾಗೂ ಕಲಾ ಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿರೋಧ ಪಕ್ಷದ ನಾಯಕರು ಸರ್ಕಾರದ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
#RaihanVadra #PriyankaGandhi #BikanerHouse #DelhiExhibition #FreedomOfExpression #UdayakalaNews #PoliticalNews


