Saturday, October 31, 2026
Menu

ಮನೆ ಬಾಗಿಲಿಗೇ ಜನನ,ಮರಣ ಪ್ರಮಾಣಪತ್ರ: ತಪ್ಪಿದ ಜನರ ಅಲೆದಾಟ

ಉದಯಕಾಲ ನ್ಯೂಸ್,ಮೈಸೂರು: ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಇನ್ನು ಮುಂದೆ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಕಷ್ಟ ತಪ್ಪಲಿದೆ. ಈ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಭಾರತೀಯ ಅಂಚೆ ಇಲಾಖೆಯ ಮೈಸೂರು ಅಂಚೆ ವಿಭಾಗವು ಕೈಜೋಡಿಸಿದ್ದು, ಪ್ರಮಾಣಪತ್ರಗಳನ್ನು ನೇರವಾಗಿ ಸಾರ್ವಜನಿಕರ ಮನೆ ಬಾಗಿಲಿಗೇ ತಲುಪಿಸುವ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ.

ಪಾಲಿಕೆ ಹಾಗೂ ಅಂಚೆ ವಿಭಾಗ ಮಹತ್ವದ ಒಪ್ಪಂದ

ಮೈಸೂರು ಮಹಾನಗರ ಪಾಲಿಕೆಯ ಚಾಮರಾಜೇಂದ್ರ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಪಾಲಿಕೆಯ ಆಯುಕ್ತರಾದ ಸವಿತಾ ಎಂ.ಕೆ. ಹಾಗೂ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್ ಅವರು ಈ ಐತಿಹಾಸಿಕ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು. ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಸುಲಭ ಮತ್ತು ಜನಸ್ನೇಹಿಯಾಗಿಸುವ ಉದ್ದೇಶದಿಂದ ಈ ವಿನೂತನ ಯೋಜನೆ ಜಾರಿಗೆ ತರಲಾಗಿದೆ.

ಸೌಲಭ್ಯ ಹಾಗೂ ಶುಲ್ಕ ವಿವರ

ಪಾಲಿಕೆಯ ಮುಖ್ಯ ಕಚೇರಿ ಹಾಗೂ ಒಂಭತ್ತೂ ವಲಯ ಕಚೇರಿಗಳಲ್ಲಿ ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಿರಲಿದೆ.

ಅರ್ಜಿ ಸಲ್ಲಿಕೆ: ಜನನ ಅಥವಾ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಾರ್ವಜನಿಕರು ಒಪ್ಪಿಗೆ ಪತ್ರದೊಂದಿಗೆ ಪ್ರಮಾಣಪತ್ರ ತಲುಪಿಸಬೇಕಾದ ಸಂಪೂರ್ಣ ವಿಳಾಸವನ್ನು ನಮೂದಿಸಬೇಕು.
ಕ್ಯಾಶ್ ಆನ್ ಡೆಲಿವರಿ (COD): ಸಿದ್ಧಗೊಂಡ ಪ್ರಮಾಣಪತ್ರವನ್ನು ಅಂಚೆ ಇಲಾಖೆ ಮೂಲಕ ಭಾರತದ ಯಾವುದೇ ಮೂಲೆಗೂ ತಲುಪಿಸಲಾಗುತ್ತದೆ. ಅಂಚೆ ಸಿಬ್ಬಂದಿ ಪ್ರಮಾಣಪತ್ರವನ್ನು ಮನೆಗೆ ತಂದುಕೊಟ್ಟಾಗ ಸಾರ್ವಜನಿಕರು 100 ರೂ. ಅಂಚೆ ವಿತರಣಾ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಈ ವ್ಯವಸ್ಥೆಯಿಂದಾಗಿ ಪ್ರಮಾಣಪತ್ರಗಳನ್ನು ಪಡೆಯಲು ಕಚೇರಿಗೆ ಪದೇ ಪದೇ ಅಲೆಯುವುದು ತಪ್ಪಲಿದ್ದು, ಸಾರ್ವಜನಿಕರ ಸಮಯ, ಪ್ರಯಾಣದ ಖರ್ಚು ಹಾಗೂ ಅನಗತ್ಯ ಶ್ರಮ ಉಳಿತಾಯವಾಗಲಿದೆ.

ಆಸ್ಪತ್ರೆಗಳ ಪ್ರತಿನಿಧಿಗಳಿಗೂ ಮಾಹಿತಿ

ಸರ್ಕಾರಿ ಆಸ್ಪತ್ರೆಗಳು ಪಾಲಿಕೆಯ ನೇರ ಆಡಳಿತ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ, ವಿವಿಧ ಆಸ್ಪತ್ರೆಗಳ ಮುಖಂಡರು ಹಾಗೂ ಅಧಿಕಾರಿಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಯೋಜನೆಯ ಕಾರ್ಯವಿಧಾನದ ಬಗ್ಗೆ ವಿವರಣೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಇತರೆ ಆಸ್ಪತ್ರೆಗಳೂ ಸಹ ಅಂಚೆ ಇಲಾಖೆಯೊಂದಿಗೆ ಇದೇ ರೀತಿಯ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ.

ಈ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಮಣಿಕುಮಾರ್, ಎಎಸ್ಎಪಿ ಮಾರ್ಕೆಟಿಂಗ್ ಅಧಿಕಾರಿ ಡಾ.ಸುರೇಶ್ ಕುಮಾರ್, ಖಾಸಗಿ ಆಸ್ಪತ್ರೆಗಳ ಅಧ್ಯಕ್ಷ ಡಾ. ಚಂದ್ರಶೇಖರ್, ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಕೆ.ಎಸ್. ಮೃತ್ಯುಂಜಯ, ಸಹಾಯಕ ಸಾಂಖ್ಯಿಕ ಅಧಿಕಾರಿ ಶಂಕರ್ ಸೇರಿದಂತೆ ಹಲವು ಗಣ್ಯರು ಹಾಗೂ ವೈದ್ಯಕೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

#MysuruCityCorporation #BirthAndDeathCertificate #IndianPost #MysuruNews #CitizenServices #UdayakalaNews #PostalDepartment

Related Posts

Leave a Reply

Your email address will not be published. Required fields are marked *