ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ಮೇಲ್ಭಾಗ ಉತ್ತಮ ಮಳೆ ಸುರಿಯುತ್ತಿರುವುದರಿಂದ ರಾಯಚೂರಿನಲ್ಲಿ ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
ರಾಯಚೂರಿನಲ್ಲಿ ಕೃಷ್ಣಾನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನದಿ ಪಾತ್ರಕ್ಕೆ ಯಾರೂ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜಲಾಶಯದ 24 ಕ್ರಸ್ಟ್ ಗೇಟ್‌ಗಳಿಂದ 1,11,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ದಂಡೆಯ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.
ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಗೆ ಕೆಲವೇ ಅಡಿಗಳು ಬಾಕಿಯಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಾರಾಯಣಪುರ ಜಲಾಶಯದಲ್ಲೂ ಒಳಹರಿವು ಹೆಚ್ಚುತ್ತಿದೆ. ನೀರಿನ ಹೊರಹರಿವು ಪ್ರಮಾಣ ಹಂತ ಹಂತವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಬೀದರ್, ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಉತ್ತಮ ಮಳೆಯಾಗುತ್ತಿದೆ. ಎರಡು ತಿಂಗಳಿನಿಂದ ಸೂಕ್ತ ಮುಂಗಾರು ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದೆ ಕಾಯುತ್ತಿದ್ದ ಜಿಲ್ಲೆಯ ರೈತರಿಗೆ ಮಳೆ ಹೊಸ ಚೈತನ್ಯ ನೀಡಿದೆ. ಹವಾಮಾನ ಇಲಾಖೆಯು ಬೀದರ್ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಿ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.


