Menu

ಕೇಂದ್ರ ಜಲ ಆಯೋಗ ಮೇಕೆದಾಟು ಡಿಪಿಆರ್‌ ವಾಪಸ್‌ ಕಳಿಸಿದ್ದೇಕೆ?

ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗವು ವಾಪಸ್‌ ಕಳುಹಿಸಿದ್ದು, ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ಆದೇಶದ ವ್ಯಾಪ್ತಿಗೆ ಹೊಂದಿಕೆಯಾಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಕರ್ನಾಟಕ ಸರ್ಕಾರ ಯೋಜನೆಯಲ್ಲಿ ಕುಡಿಯುವ ನೀರಿನ ಬಳಕೆ ಪ್ರಮಾಣವನ್ನು 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸಲು ಪ್ರಸ್ತಾಪಿಸಿತ್ತು. ಶಿವನಸಮುದ್ರ ರನ್-ಆಫ್-ದಿ-ರಿವರ್ ಜಲವಿದ್ಯುತ್ ಯೋಜನೆಯನ್ನೂ ಹೊಸದಾಗಿ ಸೇರಿಸಲಾಗಿತ್ತು. ಈ ಬದಲಾವಣೆಗಳು ಮೂಲ ಡಿಪಿಆರ್‌ನಲ್ಲಿ ಇರಲಿಲ್ಲ ಎಂದು ಸೂಚಿಸಿರುವ ಹೇಳಿರುವ ಕೇಂದ್ರ ಜಲ ಆಯೋಗವು ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ತಿಳಿಸಿ ಜೂನ್ 29ರಂದು ವರದಿಯನ್ನು ವಾಪಸ್‌ ಕಳಿಸಿದೆ.

2019ರಲ್ಲಿ ಸಲ್ಲಿಸಿದ್ದ ಮೂಲ ಡಿಪಿಆರ್‌ಗೆ ಸಂಬಂಧಿಸಿ ಆಯೋಗ ಎತ್ತಿದ್ದ ಆಕ್ಷೇಪಗಳಿಗೆ ಪ್ರತಿಯಾಗಿ ಕರ್ನಾಟಕ ಸರ್ಕಾರ 2026ರ ಏಪ್ರಿಲ್ 21ರಂದು ಪರಿಷ್ಕೃತ ವರದಿ ಸಲ್ಲಿಸಿತ್ತು. ಕಾವೇರಿ ನದಿಗೆ ಅಡ್ಡಲಾಗಿ ‘ಶಿವನಸಮುದ್ರ ರನ್-ಆಫ್-ದಿ-ರಿವರ್ ಪವರ್ ಪ್ರಾಜೆಕ್ಟ್’ ಸೇರಿಸಲಾಗಿದ್ದು, ಇದರ ಬಗ್ಗೆ ಆಯೋಗವು ಆಕ್ಷೇಪಣೆ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರ, 59.46 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಅಗತ್ಯ ಎಂದು ಸಮರ್ಥಿಸಿಕೊಂಡಿತ್ತು. ಜೂನ್- ಜುಲೈ ತಿಂಗಳಲ್ಲಿ ತಮಿಳುನಾಡಿಗೆ 13 ಟಿಎಂಸಿ, ಫೆಬ್ರವರಿಯಿಂದ ಮೇವರೆಗೆ ಪರಿಸರ ಹರಿವು ಕಾಪಾಡಲು 10 ಟಿಎಂಸಿ, 2044ರ ವೇಳೆಗೆ ಬೆಂಗಳೂರು ಮತ್ತು ಸುತ್ತಲ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕೆ 33.15 ಟಿಎಂಸಿ ಹಾಗೂ ಆವಿಯಾಗುವಿಕೆ, ಹೂಳು ಸಂಗ್ರಹಕ್ಕೆ 3.85 ಟಿಎಂಸಿ ಸೇರಿ ಒಟ್ಟು 60 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಅಗತ್ಯವಿದೆ ಎಂದು ವಾದ ಮುಂದಿಟ್ಟಿತ್ತು. ಈ ಅಂಕಿ-ಅಂಶಗಳು ಹಳೆಯವು ಎಂದು ಆಯೋಗ ಹೇಳಿದೆ.

ಕರ್ನಾಟಕವು ಹೆಚ್ಚುವರಿ 6.95 ಟಿಎಂಸಿ ನೀರನ್ನು ಬಳಸಲು ಅನುಮತಿ ಕೋರಿರುವುದನ್ನೂ ಸಿಡಬ್ಲ್ಯುಸಿ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 6.5 ಟಿಎಂಸಿ ಹೆಚ್ಚುವರಿ ಕುಡಿಯುವ ನೀರಿನ ಬಳಕೆಗೆ ಅವಕಾಶ ನೀಡಿರುವುದರಲ್ಲಿ ಬಳಕೆಯಲ್ಲಿರುವ ಪ್ರಮಾಣವೂ ಸೇರಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಹೊಸ ಪ್ರಸ್ತಾವನೆಯಲ್ಲಿ ನವೀಕೃತ ತಾಂತ್ರಿಕ ಮಾಹಿತಿ, ಪರಿಷ್ಕೃತ ಅಂಕಿ-ಅಂಶಗಳು ಮತ್ತು ಹೊಸ ನಕ್ಷೆಗಳನ್ನು ಸೇರಿಸುವಂತೆ ತಿಳಿಸಿದೆ.

Related Posts

Leave a Reply

Your email address will not be published. Required fields are marked *