Menu

48 ದಿನಗಳ ಹಿಂದೆ ಮದುವೆ: ಪತಿಯ ಕಿರುಕುಳಕ್ಕೆ ನೊಂದು ಪತ್ನಿ ಆತ್ಮಹತ್ಯೆ

48 ದಿನಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಗಂಡ ಮತ್ತು ಅತ್ತೆ-ಮಾವನ ಕಿರುಕುಳಕ್ಕೆ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಥಾಣೆಯ ಅಂಬರನಾಥ್‌ನಲ್ಲಿ ನಡೆದಿದೆ.

ವಿಶಾಖಾ ತಿಲ್ಕರ್ (26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಏಪ್ರಿಲ್ 30ರಂದು ವೈದ್ಯ ನಿತಿನ್ ತಿಲ್ಕರ್ ಎಂಬಾತನನ್ನು ವಿಶಾಖಾ ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ ನಿರೀಕ್ಷಿಸಿದಷ್ಟು ವರದಕ್ಷಿಣೆ ಸಿಗಲಿಲ್ಲವೆಂದು ಗಂಡನ ಮನೆಯವರು ಕೋಪಗೊಂಡಿದ್ದರು. ವಿಶಾಖಾ ಅವರಿಗೆ ತವರು ಮನೆಯಿಂದ ಚಿನ್ನ ಮತ್ತು ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಕಿರುಕುಳ ಕೊಡುತ್ತಿದ್ದರು.

ವಿಶಾಖಾ ನಡೆ ಬಗ್ಗೆ ಅನುಮಾನಪಟ್ಟ ಗಂಡ ಆಕೆ ಏನ್ ಮಾಡುತ್ತಾಳೆ, ಯಾರ ಜೊತೆ ಮಾತನಾಡುತ್ತಾಳೆ ಎಂದು ನಿಗಾ ಇಡಲು ಮನೆಯೊಳಗೆ ಹಾಗೂ ಹೊರಗೆ ಸಿಸಿಟಿವಿ ಅಳವಡಿಸಿದ್ದ. ವಿಶಾಖಾ ಯಾರೊಂದಿಗಾದರೂ ಮಾತನಾಡಿದರೆ ಮನೆಗೆ ಬಂದು ಹೊಡೆಯುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮುನ್ನ ಮನೆಯ ಹತ್ತಿರದ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದಕ್ಕಾಗಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಹಿಂಸೆ ತಾಳಲಾರದೆ ವಿಶಾಖಾ ತಾಯಿಗೆ ಕರೆ ಮಾಡಿ ವಿಷಯ ಹೇಳಿಕೊಂಡಿದ್ದರು. ಮಗಳ ಕಷ್ಟ ಕೇಳಿ ಪೋಷಕರು ಆಕೆಯನ್ನು ಮರಳಿ ಮನೆಗೆ ಕರೆತರಲು ಚಿಂತನೆ ನಡೆಸಿದ್ದರು. ಅಷ್ಟರಲ್ಲಿ ವಿಶಾಖಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಬರನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ವಿಶಾಖಾ ಅವರ ಪತಿ ನಿತಿನ್ ತಿಲ್ಕರ್, ಅತ್ತೆ ಛಾಯಾ ಮತ್ತು ಮೈದುನ ನಿನಾದ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಪತಿ ನಿತಿನ್‌ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *