ತಾಯಿ ಬೈದಿದ್ದಕ್ಕೆ ಸಿಟ್ಟಾಗಿ ಸೋದರಿ ಬಾಲಕಿಯರಿಬ್ಬರು ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ.
ರಾಮಚಂದ್ರ ಎಂಬವರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸೋದರಿಯರು. ಯಾವುದೋ ವಿಷಯಕ್ಕೆ ತಾಯಿ ಬೈದಿದ್ದಾರೆ. ಇದರಿಂದ ನೊಂದು ಭಾವುಕ ಪತ್ರವೊಂದು ಬರೆದಿಟ್ಟು ಮನೆ ತೊರೆದಿದ್ದಾರೆ.
ಅಮ್ಮ-ಅಪ್ಪ ಸ್ವಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ ಎಂದು ಪತ್ರ ಬರೆದಿಟ್ಟಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ.
ಪತ್ರ ನೋಡಿದ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮಕ್ಕಳ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ.
ರಾಯಚೂರಿನಲ್ಲಿ ಮಕ್ಕಳ ನಾಪತ್ತೆ
ರಾಯಚೂರು ಜಿಲ್ಲೆಯಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ಬಾಲಕಿಯರುನಾಪತ್ತೆಯಾಗಿರುವ ಪ್ರಕರಣ ಹೆಚ್ಚುತ್ತಿದೆ. 19 ಕೇಸ್ಗಳು ದಾಖಲಾಗಿದ್ದು, ಈ ಬಾಲಕಿಯರ ಪೋಷಕರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಇಂತಹ ಪ್ರಕರಣಗಳು ದಾಖಲಾಗುತ್ತಿವೆ. ಮನೆಯಿಂದ ಫ್ರೆಂಡ್ಸ್ ಮನೆಗೆ ಹೋಗಿ ಬರುತ್ತೇನೆ, ನೋಟ್ಸ್ ತರುತ್ತೇನೆ ಎಂದು ಪೋಷಕರಿಗೆ ಸುಳ್ಳು ಹೇಳಿ ಹೊರಡುವ ಬಾಲಕಿಯರು ಯುವಕರ ಜೊತೆ ನಾಪತ್ತೆಯಾಗುತ್ತಿದ್ದಾರೆ.


