Menu

17 ಜನಾನ ಇಟ್ಕೊಂಡು ಹರೀತಿನಿ, ಹರೀತಿನಿ ಅಂದ್ರೆ ಆಗುತ್ತಾ ಕುಮಾರಣ್ಣ: ಡಿಕೆ ಶಿವಕುಮಾರ್‌

ಮೊನ್ನೆ ತಾನೆ ಕುಮಾರಸ್ವಾಮಿಯವರು ಬೆಂಗಳೂರು ನಗರದಲ್ಲಿ ಬಿ ಖಾತೆಯಿಂದ ಎ ಖಾತೆ ಮಾಡಿಸಬೇಡಿ, ನಮ್ಮ ಸರ್ಕಾರ ಬಂದು ಬಿಡುತ್ತದೆ. ನೀವು ಯಾರೂ ದುಡ್ಡು ಕೊಡಲು ಹೋಗಬೇಡಿ. ನಾವು ಮಾಡುತ್ತೇವೆ ಎಂದು ಮಾತಾಡಿದ್ದಾರೆ. ಅಧಿಕಾರ ಕೊಟ್ಟಾಗ ನಿಮಗೇನೂ ಮಾಡುವುದಕ್ಕೆ ಆಗಲಿಲ್ಲ. ಅಧಿಕಾರ ಇಲ್ಲದೆ ಹೋದಾಗ ಬರೀ ಹದಿನೇಳು ಜನರನ್ನು ಇಟ್ಟುಕೊಂಡು ಹರಿತೀನಿ, ಹರಿತೀನಿ, ಹರಿತೀನಿ ಅಂದ್ರೆ ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಸಾಧ್ಯ ಇಲ್ಲ. ನಿಮ್ಮ ಶಾಸಕರು ವಿಧಾನಸಭೆಯಲ್ಲಿ ಬಡವರ ಬಗ್ಗೆ ಒಂದಿನವೂ ಮಾತಾಡಿಲ್ಲ. ಇನ್ನು ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮಾತಾಡುವುದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಂಗಳವಾರ ನಡೆದ ‘ಸಾರ್ಥಕ ಸೇವೆಯ ಸಮರ್ಪಣೆ’ ಸಮಾವೇಶದಲ್ಲಿ ಶಿವಕುಮಾರ್  ಮಾತನಾಡಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದವರು ನಡೆಸಿದ ಅಧ್ಯಯನದ ಪ್ರಕಾರ, ಕರ್ನಾಟಕದ ಪಂಚ ಗ್ಯಾರಂಟಿಗಳು ಇಡೀ ವಿಶ್ವದಲ್ಲೇ ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆಯನ್ನು ತಂದ ಕಾರ್ಯಕ್ರಮಗಳಾಗಿವೆ. ಇವು ವಿಶ್ವಕ್ಕೆ ಒಂದು ಮಾದರಿ. ಎಲ್ಲಾ ರಾಜ್ಯಗಳು ಗ್ಯಾರಂಟಿ ಮಾದರಿ ಅನುಸರಿಸುತ್ತಿವೆ. ನಮ್ಮ ಬಿಜೆಪಿ ಸ್ನೇಹಿತರು, ಪ್ರಧಾನಮಂತ್ರಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆಗಳ ಸುರಿಮಳೆಯನ್ನೇ ಮಾಡಿದರು. ಇವತ್ತು ಪ್ರತಿಯೊಂದು ರಾಜ್ಯದಲ್ಲೂ ಅವರೇ ಗ್ಯಾರಂಟಿ ಯೋಜನೆ ಪ್ರಕಟಿಸುತ್ತಿದ್ದಾರೆ. ಯಾವುದೇ ಪಕ್ಷವೂ ಇದಕ್ಕೆ ಹೊರತಾಗಿಲ್ಲ. . ನಾವು ಅಂದು ಜನಸಾಮಾನ್ಯರ ಜೀವನ ಉಳಿಯಬೇಕು ಎಂದು ಬದ್ದತೆಯಿಂದ ಕೆಲಸ ಮಾಡಿದೆವು. ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ.  ಸಹಾಯ ಮಾಡಬೇಕು ಅಂತಲೇ ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದೆವು. ಈಗ ವಿರೋಧ ಪಕ್ಷಗಳು  ನಮ್ಮ ಜನಪರ ಗ್ಯಾರಂಟಿ ಮಾದರಿಯನ್ನೇ ಅನುಸರಿಸುತ್ತಿವೆ ಎಂದರು.

ಬಿಜೆಪಿಯವರು ಸಿಕ್ಕ ಅವಕಾಶದಲ್ಲಿ ಏನು ಬದಲಾವಣೆ ತಂದಿದ್ದಾರೆ.  ಪ್ರಧಾನ ಮಂತ್ರಿಯಾಕೆ ಪೆಟ್ರೋಲ್ ಕಡಿಮೆ ಉಪಯೋಗಿಸಿ, ಅಡುಗೆ ಎಣ್ಣೆ ಕಡಿಮೆ ಉಪಯೋಗಿಸಿ, ಮೆಟ್ರೋ ಬಳಸಿ, ಬಸ್ ಅಲ್ಲಿ ಓಡಾಡಿ, ಕಾರನ್ನು ಬಳಸಬೇಡಿ, ಚಿನ್ನ ತಗೋಬೇಡಿ, ಇರುವ ಮಾಂಗಲ್ಯ ತೆಗೆದು ಹಾಕಿ, ಅರಶಿನ ಕೊಂಬು ಕಟ್ಟಿಕೊಳ್ಳಿ ಅಂತ ಹೇಳ್ತಾ ಇದ್ದಾರೆ ಎಂದು ಪ್ರಶ್ನಿಸಿದರು.

“ಡಾಲರ್ ಬೆಲೆ ತೊಂಬತ್ತಾರು ರೂಪಾಯಿ ಆಗೋಗಿದೆ. ಪೆಟ್ರೋಲ್ ಬೆಲೆಯನ್ನು ಮಂಗಳವಾರವೂ (ಇಂದು) ಒಂದು ರೂಪಾಯಿ ಜಾಸ್ತಿ ಮಾಡಿದ್ದಾರೆ. ಇದರ ಬಗ್ಗೆ ಬಿಜೆಪಿ ನಾಯಕರುಗಳು ಯಾಕೆ ಮಾತಾಡ್ತಾ ಇಲ್ಲ? ಸಂಸತ್ ಸದಸ್ಯರು ಯಾಕೆ ದನಿ ಎತ್ತುತ್ತಿಲ್ಲ? ಅಶೋಕ್ ಅವರು, ವಿಜಯೇಂದ್ರ ಅವರು ಯಾಕೆ ಇದರ ಬಗ್ಗೆ ಚರ್ಚೆ ಮಾಡ್ತಾ ಇಲ್ಲ? ಜನರ ಹೊಟ್ಟೆ ಪಾಡಿಗೆ ನಿಮ್ಮ ಉತ್ತರವೇನು” ಎಂದು ವ್ಯಂಗ್ಯವಾಡಿದರು‌.

“ಶಕ್ತಿ ಯೋಜನೆ ದಾಖಲೆ ಸೃಷ್ಟಿಸಿದೆ. ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಇತಿಹಾಸ ನಿರ್ಮಾಣ ಆಗಿದೆ. ಐದು ಸಾವಿರ ಹೊಸ ಬಸ್ಸನ್ನ ಖರೀದಿ ಮಾಡಿದ್ದಾರೆ. ನನ್ನ ತಾಯಂದಿರು ಆತ್ಮವಿಶ್ವಾಸದಿಂದ ಓಡಾಡುತ್ತಿದ್ದಾರೆ. ದೇವರು ಕೊಟ್ಟಿರೋದು ಎರಡು ಆಯ್ಕೆ, ಒಂದು ಕೊಟ್ಟು ಹೋಗಬೇಕು, ಇಲ್ಲ ಬಿಟ್ಟು ಹೋಗಬೇಕು. ಅದೇರೀತಿ ಅಧಿಕಾರ ಸಿಕ್ಕಿರುವಾಗ ಎಲ್ಲ ಮಂತ್ರಿಗಳು ತಮ್ಮ ಇಲಾಖೆಯಲ್ಲಿ ಒಂದು ದೊಡ್ಡ ಸಾಧನೆಗಳನ್ನು ಮಾಡಿ ಜನರಿಗೆ ಶಕ್ತಿ ತುಂಬಿದ್ದಾರೆ” ಎಂದರು.

2028 ಕ್ಕೆ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಜನತಾದಳ ಹಾಗೂ ಬಿಜೆಪಿಯವರು ಇದನ್ನು ಬರೆದಿಟ್ಟುಕೊಳ್ಳಿ‌. ಜನರು ಕೂಡ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ” ಎಂದು ಡಿಸಿಎಂ ಹೇಳಿದರು.  ಕಾಂಗ್ರೆಸ್  ಇಡೀ ದೇಶಕ್ಕೆ  ಮಾದರಿ ಸರ್ಕಾರವನ್ನು ಕೊಟ್ಟಿದೆ, ಅದನ್ನು ಉಳಿಸಿಕೊಂಡು ಹೋಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಇರಲಿ. ಪರಿಶ್ರಮ ಇದ್ದ ಕಡೆ ಇತಿಹಾಸ ಸೃಷ್ಟಿ ಆಗುತ್ತದೆ. ನಂಬಿಕೆ ಇದ್ದ ಕಡೆ ಅದ್ಭುತಗಳು ನಡೆಯುತ್ತವೆ ಎಂದು ಹೇಳಿದರು.  ‌

ಆರನೇ ಗ್ಯಾರಂಟಿಯಾಗಿ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ 1,11,11,111 ಜನರಿಗೆ ಭೂಮಿ ಗ್ಯಾರಂಟಿಯನ್ನ ಕೊಟ್ಟಿದ್ದೇವೆ. ಬೆಂಗಳೂರು ನಗರದಲ್ಲಿ 27 ಲಕ್ಷದ ಜನರಿಗೆ ಭೂಮಿ ಗ್ಯಾರಂಟಿಯನ್ನು ನಾವು ಕೊಟ್ಟಿದ್ದೇವೆ. ಬಿಜೆಪಿ, ಜನತಾದಳದ ಸ್ನೇಹಿತರಲ್ಲಿ ಕೆಲವರು ಇದನ್ನು ಟೀಕೆ ಮಾಡ್ತಾ ಇದ್ದಾರೆ.  ಡಬಲ್ ಎಂಜಿನ್ ಸರ್ಕಾರ ಇದ್ದಾಗ ಇಂತಹ ಜನಪರ ಕೆಲಸವನ್ನು ನೀವು ಏಕೆ ಮಾಡಲು ಆಗಲಿಲ್ಲ. ಕೋವಿಡ್ ವೇಳೆ ಮರಣ ಹೊಂದಿದ, ನರಳಿದ ಜನರಿಗೆ ನಿಮ್ಮ ಕೈಯಲ್ಲಿ ಸರಿಯಾಗಿ ನ್ಯಾಯ ಒದಗಿಸಿಕೊಡಲು ಆಗಲಿಲ್ಲ. ಇತ್ತೀಚೆಗೆ ನಾನು, ಸಿದ್ದರಾಮಯ್ಯನವರು ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತದಲ್ಲಿ ಸತ್ತಂತ ಜನರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿದ್ದೇವೆಎಂದರು.

“ನಾನು, ಸಿದ್ದರಾಮಯ್ಯನವರು, ನಮ್ಮ ಪಕ್ಷದ ವರಿಷ್ಠರು ಚರ್ಚೆ ಮಾಡಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಪರಮೇಶ್ವರ್ ಅವರನ್ನ ನೇಮಕ ಮಾಡಲಾಯಿತು.  ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ.‌ ಮಾತು ಕೊಡುವುದು ಮುಖ್ಯ ಅಲ್ಲ. ಆ ಮಾತನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂಬುದನ್ನು ನಾವು ತೋರಿಸಿದ್ದೇವೆ. ಇವತ್ತು ಈ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಿಮಗೆ ಹಕ್ಕು ಪತ್ರಗಳನ್ನು ನೀಡುತ್ತಿದ್ದೇವೆ” ಎಂದು ಡಿಸಿಎಂ ಹೇಳಿದರು.

ಸಹೋದ್ಯೋಗಿ ಪರಮೇಶ್ವರ್ ಅವರು, ಬೆಂಗಳೂರಿನ ಜನಸಂಖ್ಯೆ ನಿಯಂತ್ರಣ ಮಾಡಬೇಕಾದರೆ ಇರುವುದು ಒಂದೇ ಉಪಾಯ ಉತ್ತರ ಭಾಗದಲ್ಲಿ ಇರುವ ತುಮಕೂರನ್ನು ಎರಡನೇ ಬೆಂಗಳೂರಾಗಿ ಪರಿವರ್ತನೆ ಮಾಡಬೇಕು ಎಂದಿದ್ದಾರೆ ಎಂದರು.

Related Posts

Leave a Reply

Your email address will not be published. Required fields are marked *