Menu

ಜಿಬಿಎ ಚುನಾವಣೆ ಡಿಸೆಂಬರ್‌ ಒಳಗೆ ನಡೆಸಲು ಕೋರಿ ರಾಜ್ಯ ಸರ್ಕಾರದಿಂದ ಸುಪ್ರೀಂಗೆ ಅರ್ಜಿ

ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ ಒಳಗೆ ನಡೆಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಎಸ್‌ಐಆರ್ ನಡೆಯುತ್ತಿರುವುದರಿಂದ ಆಗಸ್ಟ್‌ನಲ್ಲಿ ಚುನಾವಣೆ ನಡೆಸುವುದು ಕಷ್ಟ ಎಂದು ಸರ್ಕಾರ ವಾದಿಸಿದೆ.

ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಮತ್ತು ವಿಚಾರಣೆ ಪೂರ್ಣಗೊಂಡಿಲ್ಲ. ಚುನಾವಣೆ ನಡೆಸುವ ಸಿಬ್ಬಂದಿಯೇ ಎಸ್‌ಐಆರ್ ಕೆಲಸದಲ್ಲಿದ್ದಾರೆ. 8,972 ಬಿಎಲ್‌ಒಗಳು, 938 ಮೇಲ್ವಿಚಾರಕರು, 28 ಇಆರ್‌ಒ, 75 ಸಹಾಯಕ ಇಆರ್‌ಒಗಳು ಸೇರಿದಂತೆ ಸಾವಿರಾರು ಸಿಬ್ಬಂದಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದೆ.

ಆಗಸ್ಟ್ 31 ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಚುನಾವಣೆಗೆ 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಮತದಾನ ಕೇಂದ್ರ ಸಿಬ್ಬಂದಿ, ರಿಟರ್ನಿಂಗ್ ಆಫಿಸರ್, ಭದ್ರತಾ ಸಿಬ್ಬಂದಿ ಸೇರಿದಂತೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕಾಗುತ್ತದೆ. ಎಸ್‌ಐಆರ್ ನಡೆಯುತ್ತಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗುತ್ತದೆ. 1.03 ಕೋಟಿ ಮತದಾರರಿದ್ದಾರೆ. 40 ಲಕ್ಷ ಮನೆಗಳಿಗೆ ಭೇಟಿ ನೀಡಿ ಮತಪಟ್ಟಿ ಪರಿಶೀಲನೆ ನಡೆಸಬೇಕಿದೆ, ಕರಡು ಮತದಾರರ ಪಟ್ಟಿಗೆ ಲಕ್ಷಾಂತರ ಆಕ್ಷೇಪಣೆಗಳು ಬರಬಹುದು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು/ಆಕ್ಷೇಪಣೆಗಳು ಬರಬಹುದು ಎಂದು ಸರ್ಕಾರ ತಿಳಿಸಿದೆ.

ನಿಖರ ಮತದಾರರ ಪಟ್ಟಿಯಿಲ್ಲದೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಂತಿಮ ಹಾಗೂ ಸರಿಯಾದ ಮತದಾರರ ಪಟ್ಟಿ ಅಗತ್ಯ. ಹೀಗಾಗಿ ಚುನಾವಣೆ ನಡೆಸಲು ಡಿಸೆಂಬರ್‌ ತನಕ ಸಮಯ ಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

Related Posts

Leave a Reply

Your email address will not be published. Required fields are marked *