Menu

ಅಯೋಧ್ಯೆ ಮಂದಿರ ಹಣ ಎಣಿಕೆ ಸಿಬ್ಬಂದಿ ಸಾಮೂಹಿಕ ರಾಜೀನಾಮೆ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ದ ಹಣ ಎಣಿಕೆಗೆ ನಿಯೋಜನೆಗೊಂಡಿದ್ದವರಲ್ಲಿ 23 ಹಣ ಎಣಿಕೆ ಸಿಬ್ಬಂದಿ ಟ್ರಸ್ಟ್‌ನ ಕಠಿಣ ನಿಯಮಗಳಿಗೆ ಬೇಸತ್ತು ಕೆಲಸಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ರಾಮಮಂದಿರಕ್ಕೆ ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ಎಣಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಾರಿಗೊಳಿಸಿರುವ ಹೊಸ ಸುರಕ್ಷತಾ ನಿಯಮಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಬರುವ ಹಣ ಮತ್ತು ಚಿನ್ನಾಭರಣ ಎಣಿಸುವ ಸಿಬ್ಬಂದಿ ಜೇಬುಗಳಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಜೇಬಿಲ್ಲದ ಉಡುಪುಗಳನ್ನು ಧರಿಸಿ ಮಾತ್ರ ಎಣಿಕೆ ಕೋಣೆಗೆ ಬರಬೇಕು ಎಂದು ಟ್ರಸ್ಟ್ ಕಡ್ಡಾಯಗೊಳಿಸಿದೆ.

ಕಾಣಿಕೆ ಎಣಿಕೆ ಮಾಡಲು ಒಳಗೆ ಹೋಗುವಾಗ ಮತ್ತು ಎಣಿಕೆ ಮುಗಿಸಿ ಹೊರಬರುವಾಗ ಪೊಲೀಸರು ಸಿಬ್ಬಂದಿಯನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಾರೆ. ಒಳಗೆ ಹೋಗುವಾಗ ಬೆಲ್ಟ್, ಪರ್ಸ್ ಅಥವಾ ಯಾವುದೇ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಎಣಿಕೆ ನಡೆಯುವ ಇಡೀ ಕೊಠಡಿಯು ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತದೆ.

ರಾಮಮಂದಿರದ ದೇಣಿಗೆಯನ್ನು ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕುಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೊಸ ನಿಯಮಗಳು ಹಾಗೂ ಪೊಲೀಸರ ತಪಾಸಣಾ ಶೈಲಿ ತಮಗೆ ಅವಮಾನ ಮತ್ತು ಕಿರುಕುಳ ಎಂದು ಭಾವಿಸಿ 23 ಸಿಬ್ಬಂದಿ ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ. ಭದ್ರತೆಯ ಹೆಸರಿನಲ್ಲಿ ತಮ್ಮ ಪ್ರಾಮಾಣಿಕತೆಯನ್ನು ಶಂಕಿಸಲಾಗುತ್ತಿದೆ ಎಂದು ದೂರಿದ್ದಾರೆ.

ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿದ್ದ ಹಣ ಏಣಿಕೆ ಕೆಲಸವನ್ನು ಈಗ ಒಂದೇ ಪಾಳಿಗೆ ಇಳಿಸಲಾಗಿದೆ. ಕರ್ತವ್ಯದ ಸಮಯವನ್ನು ಆರರಿಂದ ಒಂಬತ್ತು ಗಂಟೆಗಳವರೆಗೆ ಹೆಚ್ಚಿಸಲಾಗಿದೆ ಎಂದು ನೌಕರರು ಹೇಳಿಕೊಂಡಿದ್ದಾರೆ.
ತಿಂಗಳ ಸಂಬಳವನ್ನು ಕಡಿಮೆ ಮಾಡಲಾಗಿದೆ. ಉದ್ಯೋಗಿಗಳು ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ವಿಭಿನ್ನ ವೇತನವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಸಿಕ ರಜೆ ದಿನಗಳ ಸಂಖ್ಯೆಯನ್ನು ಮೊಟಕುಗೊಳಿಸಲಾಗಿದೆ ಎಂದು ದೂರಿದ್ದಾರೆ.

ಕೆಲವು ದೇಣಿಗೆ ದುರುಪಯೋಗ ಸುದ್ದಿ ಬೆಳಕಿಗೆ ಬಂದ ಬಳಿಕ ಈ ಕ್ರಮ ಅನಿವಾರ್ಯ ಎಂದು ಮಂಡಳಿ ಸಮರ್ಥಿಸಿಕೊಂಡಿದೆ. ಭವಿಷ್ಯದಲ್ಲಿ ಹಣ ಎಣಿಕೆಯಲ್ಲಿ ಮಾನವ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಟ್ರಸ್ಟ್ ನಿರ್ಧರಿಸಿದೆ. ಹೈಟೆಕ್ ನೋಟು ಎಣಿಕೆ ಯಂತ್ರಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ.

Related Posts

Leave a Reply

Your email address will not be published. Required fields are marked *