Wednesday, August 05, 2026
Menu

ಸ್ನೇಹಿತನ ಬರ್ತ್‌ಡೇ ಮುಗಿಸಿ ಬರುವಾಗ ಉರುಳಿದ ಜೀಪ್‌: ಯುವಕರಿಬ್ಬರ ಸಾವು

ಸ್ನೇಹಿತನ ಹುಟ್ಟು ಹಬ್ಬ ಆಚರಿಸಿ ಮಂಗಳವಾರ ರಾತ್ರಿ ವಾಪಸಾಗುತ್ತಿದ್ದಾಗ ಜೀಪ್‌ ನಿಯಂತ್ರಣ ಕಳೆದುಕೊಂಡು ಉರುಳಿದ ಪರಿಣಾಮವಾಗಿ ಯುವಕರಿಬ್ಬರು ಮೃತಪಟ್ಟಿರುವ ಘಟನೆ ನೆಲಮಂಗಲದ ಕಂಬಾಳು ಗ್ರಾಮದ ಬಳಿ ನಡೆದಿದೆ.

ಪವನ್, ದೀಪಕ್ ಮೃತಪಟ್ಟವರು. ಗೆಳೆಯನ ಹುಟ್ಟುಹಬ್ಬ ಮುಗಿಸಿಕೊಂಡು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಗದ್ದೆಗೆ ಬಿದ್ದಿದೆ. ಗಾಯಾಳುಗಳಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗದ ಕಾರಣ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬರ್ತ್‌ಡೇ ಆಚರಣೆಗೆ ಕರೆದು ರೇಪ್‌ಗೆ ಯತ್ನಿಸಿ ಯುವತಿಯ ಕೊಲೆ
ಮಂಡ್ಯ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯನ್ನು ಬರ್ತ್‌ಡೇ ಆಚರಣೆಗೆ ಕರೆದು ರೇಪ್‌ಗೆ ಯತ್ನಿಸಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಂಡ್ಯ ನಗರದ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ವಾಸವಿದ್ದ ಹೊನ್ನೆಮಡು ಗ್ರಾಮದ 19 ವರ್ಷದ ನವೀನಾ ಕೊಲೆಯಾದವರು. ಆ.2ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಘಟನೆ ನಡೆದ ದಿನ ಮನೆಗೆ ಹೋಗುವುದಾಗಿ ಪಿಜಿ ಮಾಲೀಕರಿಗೆ ತಿಳಿಸಿದ್ದ ನವೀನಾ, ಸ್ನೇಹಿತರಾದ ಅಶ್ವಿನಿ, ವಿಷ್ಣು ಹಾಗೂ ಶಿವಕುಮಾರ್ ಜೊತೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದರು. ಕೊಮ್ಮೇರಹಳ್ಳಿ ಬಳಿ ಕಾರು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ನವೀನಾ ಸ್ಥಳದಲ್ಲೇ ಅಸು ನೀಗಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಜೆ ಅಪಘಾತ ನಡೆದಿದ್ದು, ರಾತ್ರಿ 11 ಗಂಟೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಇದು ರಸ್ತೆ ಅಪಘಾತದಂತೆ ಕಂಡರೂ ಕೊಲೆ ಎಂಬ ಆರೋಪ ಕೇಳಿಬಂದಿದೆ.

ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಕರೆದೊಯ್ದ ಸ್ನೇಹಿತರೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನವೀನಾ ಒಪ್ಪದಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ್ದಾರೆ. ಕೊಲೆ ಮಾಡಿದ ನಂತರ ನವೀನಾಳ ಶವವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾರೆ ಎಂದು ನವೀನಾಳ ತಾಯಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅಶ್ವಿನಿ ಹಾಗೂ ನವೀನಾ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಷ್ಣು ಹಾಗೂ ಶಿವಕುಮಾರ್ ಕಾರ್ಪೇಂಟರ್ ಕೆಲಸ ಮಾಡುತ್ತಿದ್ದರು. ಹುಟ್ಟುಹಬ್ಬ ಆಚರಣೆಗೆಂದು ಕಾರಿನಲ್ಲಿ ಒಟ್ಟಿಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ, ತನಿಖೆಯ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *