ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮ ಮೂರು ವಾರಗಳವರೆಗೆ ವಿಸ್ತರಣೆಯಾಗಿದೆ. ಎರಡೂ ದೇಶಗಳು ಕದನ ವಿರಾಮ ವಿಸ್ತರಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ಏ.23 ರಂದು ನಡೆದ ಎರಡನೇ ಸುತ್ತಿನ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಏಪ್ರಿಲ್ 16 ರಂದು ಮೊದಲ ಬಾರಿಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿತ್ತು. ಎರಡೂ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯು ಯಶಸ್ವಿಯಾಗಿದೆ ಎಂದು ಟ್ರಂಪ್ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಮೆರಿಕವು ಲೆಬನಾನ್‌ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು ಶ್ವೇತಭವನಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಶಾಶ್ವತ ಶಾಂತಿಗಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶಾಂತಿ ಮಾತುಕತೆಗಳ ನಡುವೆಯೂ ಇರಾನ್ ಹಿಜ್ಬುಲ್ಲಾ ಸಂಘಟನೆಗೆ ನೀಡುತ್ತಿರುವ ಧನಸಹಾಯವನ್ನು ನಿಲ್ಲಿಸಬೇಕು ಮತ್ತು ಹರ್ಮುಜ್ ಜಲಸಂಧಿಯಲ್ಲಿ ಯಾವುದೇ ತೊಂದರೆ ಉಂಟುಮಾಡಬಾರದು ಎಂದು ಟ್ರಂಪ್ ಸೂಚನೆ ನೀಡಿದ್ದಾರೆ.


