ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಡ್ರೋನ್ ಮತ್ತು ವಾಯು ದಾಳಿ ಮುಂದುವರಿಸಿದ್ದು, ಕನಿಷ್ಠ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಶನಿವಾರ ಬೆಳಗಿನ ಜಾವದವರೆಗೆ ಇಸ್ರೇಲ್ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಲೆಬನಾನ್‌ನ ನಬತಿಯೇಹ್ ವಸತಿ ಕಟ್ಟಡಗಳ ಮೇಲೆ ನಿರಂತರ ದಾಳಿ ನಡೆಸಿವೆ. ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಲೆಬನಾನ್‌ನಲ್ಲಿ ಭೀಕರ ಸಮರ ನಡೆಸಿದ್ದ ಇಸ್ರೇಲ್ ಮತ್ತು ಹೆಜ್ಬೊಲ್ಲಾ ಉಗ್ರರು ಇತ್ತೀಚೆಗೆ ಅಮೆರಿಕ ಮತ್ತು ಕತಾರ್‌ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದರು. ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ಎಲ್ಲಾ ಕಡೆ ತಕ್ಷಣವೇ ಮಿಲಿಟರಿ ಕಾರ್ಯಾಚರಣೆಗಳನ್ನು ಇಸ್ರೇಲ್ ನಿಲ್ಲಿಸಬೇಕು.ಲೆಬನಾನ್ ದೇಶದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಹೇಳಲಾಗಿತ್ತು.
ಈ ದಾಳಿಗೂ ಮೊದಲು ಶುಕ್ರವಾರ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ 16 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದರು. ಕೆಲವರು ಕಟ್ಟಡದ ಅವಶೇಷಗಳಡಿ ಕಾಣೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಅಂತಾರಾಷ್ಟ್ರೀಯವಾಗಿ ಇಸ್ರೇಲ್‌ನ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಕ್ಷಣ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ದಾಳಿಯನ್ನು ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ಲೆಬನಾನ್ ಖಂಡಿಸಿದೆ.
ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಗಳು ಮುಂದುವರಿದರೆ ಅದರ ಪರಿಣಾಮ ಗಂಭೀರವಾಗಿರಲಿದೆ ಎಂದು ಇರಾನ್ ಅಮೆರಿಕಕ್ಕೆ ಈಗಾಗಲೇ ಎಚ್ಚರಿಕೆ ನೀಡಿದೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಮುಖ್ಯಸ್ಥ ಎಬ್ರಾಹಿಂ ಅಜೀಜಿ, ಶಾಂತಿ ಒಪ್ಪಂದದ ಮೊದಲ ಷರತ್ತನ್ನು ಜಾರಿಗೆ ತರಲು ಅಮೆರಿಕ ವಿಫಲವಾಗಿದೆ. ಇರಾನ್ ಜನರ ವಿಶ್ವಾಸಗಳಿಸುವ ಇಚ್ಛಾಶಕ್ತಿ ಅಮೆರಿಕಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಈ ಪರಿಸ್ಥಿತಿ ಮುಂದುವರಿದರೆ ಅದಕ್ಕೆ ಅಮೆರಿಕ ದೊಡ್ಡ ಬೆಲೆ ತೆರಬೇಕಾಗುತ್ತದೆ. ನಾವು ನಮ್ಮ ನಿಲುವಿನಲ್ಲಿ ದೃಢವಾಗಿದ್ದೇವೆ ಎಂದು ಹೇಳಿದ್ದಾರೆ. ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ರೇಲ್ ರಕ್ಷಣಾ ಪಡೆಯ ಟ್ಯಾಂಕ್ ಬೆಟಾಲಿಯನ್ ಕಮಾಂಡರ್ ಸೇರಿದಂತೆ ನಾಲ್ವರು ಸೈನಿಕರು ಮೃತಪಟ್ಟಿದ್ದರು. ಈ ಬೆಳವಣಿಗೆಯ ಬಳಿಕ ಎರಡೂ ಕಡೆಯಿಂದ ಮತ್ತೆ ದಾಳಿಗಳು ನಡೆದಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.


