ಉದಯಕಾಲ ನ್ಯೂಸ್, ಬೆಂಗಳೂರು: ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಓದಿನ ನಂತರ ಉದ್ಯೋಗ ಕಲ್ಪಿಸಲು ಹಾಗೂ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯವು (Garden City University) ದೇಶದಲ್ಲೇ ವಿನೂತನವಾದ ಕೈಗಾರಿಕಾ ಆಧಾರಿತ ‘ಮಾಡ್ಯುಲರ್ ಎಂ.ಟೆಕ್’ (Modular M.Tech) ಕೋರ್ಸ್ ಅನ್ನು ಪರಿಚಯಿಸುತ್ತಿದೆ ಎಂದು ವಿವಿಯ ಉಪ ಕುಲಪತಿ ಡಾ. ರಾಮಚಂದ್ರೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಹೊಸ ಕೋರ್ಸ್ ಕುರಿತು ಮಾಹಿತಿ ನೀಡಿದ ಉಪಕುಲಪತಿಗಳು ಉದ್ಯಮ ಕ್ಷೇತ್ರದ ಅಗತ್ಯತೆಗಳಿಗೆ ತಕ್ಕಂತೆ ನುರಿತ ಎಂಜಿನಿಯರಿಂಗ್ ವೃತ್ತಿಪರರನ್ನು ರೂಪಿಸುವ ಸದುದ್ದೇಶದಿಂದ ‘ಟೆನ್ಸಾರ್ ಕ್ಸೆಂಟ್ರಿಕ್ಸ್ ಪ್ರೈವೇಟ್ ಲಿಮಿಟೆಡ್’ (Tensor Centrix Pvt Ltd) ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಕೋರ್ಸ್‌ನ ಪ್ರಮುಖ ವಿಶೇಷತೆಗಳು
ಇಂದಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ತಮ್ಮ ಅರಿವನ್ನು ನೈಜ ಕೈಗಾರಿಕಾ ಸಮಸ್ಯೆಗಳಿಗೆ ಅನ್ವಯಿಸುವ ಸಾಮರ್ಥ್ಯ ಹಾಗೂ ಪ್ರಾಯೋಗಿಕ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು.
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ (Emerging Technologies) ಅರಿವನ್ನು ಮೂಡಿಸಲು ಗಾರ್ಡನ್ ಸಿಟಿ ವಿವಿಯು ಶಿಕ್ಷಣ ಹಾಗೂ ಕೈಗಾರಿಕಾ ಜಗತ್ತನ್ನು ಒಂದೇ ವೇದಿಕೆಗೆ ತಂದಿದೆ.
ವಿದ್ಯಾರ್ಥಿಗಳನ್ನು ಕೇವಲ ಪದವೀಧರರನ್ನಾಗಿಸುವ ಬದಲಿಗೆ, ತಂತ್ರಜ್ಞಾನವನ್ನು ಆಳವಾಗಿ ಅರ್ಥಮಾಡಿಕೊಂಡು, ವಿಶ್ಲೇಷಿಸಿ, ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಬಲ್ಲ ಸಮರ್ಥ ನುರಿತ ವೃತ್ತಿಪರರನ್ನಾಗಿ ರೂಪಿಸುವುದೇ ಈ ಮಾಡ್ಯುಲರ್ ಕೋರ್ಸ್‌ನ ಮುಖ್ಯ ಗುರಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಟೆನ್ಸಾರ್ ಕ್ಸೆಂಟ್ರಿಕ್ಸ್ ಸಂಸ್ಥೆಯ ಸಿಇಒ ಡಾ. ಮನುಸೂದನ್, ಪ್ರಮುಖರಾದ ಹಮೀಮ್ ಶಾನ್‌ವಾಜ್, ಯಶೋಧಮ್ಮ ಹಾಗೂ ಜಯಕುಮಾರ್ ಉಪಸ್ಥಿತರಿದ್ದರು.
#GardenCityUniversity #ModularMTech #EngineeringEducation #BengaluruNews #TensorCentrix #HigherEducation #TechNews #UdayakalaNews


