Menu

ವೃದ್ಧೆಯನ್ನು ಕೊಂದು ಮೂಟೆ ಕಟ್ಟಿದ್ದ ಅಪರಾಧಿ ಬಂಧನ!

ಉದಯಕಾಲ ನ್ಯೂಸ್, ಹಾಸನ: ವೃದ್ಧೆಯೊಬ್ಬರನ್ನು ಕ್ರೂರವಾಗಿ ಕೊಲೆ ಮಾಡಿ, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನಾಲೆಗೆ ಎಸೆದು ಪರಾರಿಯಾಗಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲದ ಹಣ ವಾಪಸ್ ನೀಡದ್ದಕ್ಕೆ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.
ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ಅಕ್ಟೋಬರ್ 7ರಂದು ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಲಕ್ಷ್ಮಮ್ಮ (67) ಎಂಬವರ ಶವ ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಣನೂರು ಠಾಣಾ ಪೊಲೀಸರು ತನಿಖೆ ಕೈಗೊಂಡು, ರಮೇಶ್ (58) ಎಂಬಾತನನ್ನು ಬಂಧಿಸಿದ್ದಾರೆ.

ಸಾಲವೇ ಕೊಲೆಗೆ ಕಾರಣ
ಮೃತ ವೃದ್ಧೆ ಲಕ್ಷ್ಮಮ್ಮ ಅವರು ಆರೋಪಿ ರಮೇಶ್ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಪಡೆದ ಹಣವನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರಮೇಶ್, ವೃದ್ಧೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಅಕ್ಟೋಬರ್ 3ರಂದು ವಿಜಯಕೊಪ್ಪಲಿಗೆ ಹೋಗಿ ಬರುವುದಾಗಿ ಪತಿಗೆ ತಿಳಿಸಿ ಲಕ್ಷ್ಮಮ್ಮ ಮನೆಯಿಂದ ಹೊರಟಿದ್ದರು. ದಾರಿಯಲ್ಲಿ ಸಿಕ್ಕ ರಮೇಶ್ ತಾನು ಬೈಕ್‌ನಲ್ಲಿ ಡ್ರಾಪ್ ನೀಡುವುದಾಗಿ ನಂಬಿಸಿ ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬೆಟ್ಟದಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ ವೃದ್ಧೆಯೊಂದಿಗೆ ಜಗಳವಾಡಿ ಕಪಾಳಕ್ಕೆ ಹೊಡೆದು, ಬಳಿಕ ಕತ್ತು ಹಿಸುಕಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ವೃದ್ಧೆಯ ಮೈಮೇಲಿದ್ದ ಒಡವೆಗಳನ್ನು ದೋಚಿ, ತಾನು ಮೊದಲೇ ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ತುಂಬಿ ನಾಲೆಗೆ ಎಸೆದು ಪರಾರಿಯಾಗಿದ್ದ ಎಂದು ಅರಕಲಗೂಡು ವೃತ್ತ ನಿರೀಕ್ಷಕ ವಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

120 ಗ್ರಾಂ ಚಿನ್ನಾಭರಣ ದೋಚಿದ ಕಟುಕ
ವೃದ್ಧೆಯನ್ನು ಕೊಲೆ ಮಾಡುವ ಮುನ್ನ ಆಕೆಯ ಮೈಮೇಲಿದ್ದ ಚಿನ್ನದ ತಾಳಿ, ಕಾಸಿನ ಸರ, ಓಲೆ, ಮಾಟಿ ಹಾಗೂ ಮೂರು ಉಂಗುರಗಳು ಸೇರಿದಂತೆ ಸುಮಾರು 120 ಗ್ರಾಂ ಚಿನ್ನಾಭರಣಗಳನ್ನು ಆರೋಪಿ ರಮೇಶ್ ಕಸಿದುಕೊಂಡಿದ್ದ. ಕಳವು ಮಾಡಿದ್ದ ಚಿನ್ನದ ಪೈಕಿ ಒಂದು ಉಂಗುರವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಸಾಲ ಪಡೆದಿದ್ದರೆ, ಉಳಿದ ಬೆಲೆಬಾಳುವ ಆಭರಣಗಳನ್ನು ಶುಂಠಿ ಬೆಳೆದಿದ್ದ ತನ್ನ ಜಮೀನಿನ ಬಳಿಯ ಹಳೆಯ ಕೋಣೆಯಲ್ಲಿ ಪ್ಲಾಸ್ಟಿಕ್ ಪೈಪ್‌ಗಳ ನಡುವೆ ಸುರಕ್ಷಿತವಾಗಿ ಬಚ್ಚಿಟ್ಟಿರುವುದಾಗಿ ಆರೋಪಿ ಬಾಯಬಿಟ್ಟಿದ್ದಾನೆ.

ಅಕ್ಟೋಬರ್ 3ರಿಂದ ನಾಪತ್ತೆಯಾಗಿದ್ದ ಲಕ್ಷ್ಮಮ್ಮ ಅವರ ಮೃತದೇಹ ಅ. 7ರಂದು ನಾಲೆಯಲ್ಲಿ ಪತ್ತೆಯಾಗಿತ್ತು. ಸದ್ಯ ಕೊಣನೂರು ಠಾಣೆಯ ಪೊಲೀಸರು ಆರೋಪಿಯಿಂದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
#Hassan #Arkalgud #CrimeNews #MurderCase #HemavathiCanal #PoliceInvestigation #KarnatakaNews #UdayakalaNews

Related Posts

Leave a Reply

Your email address will not be published. Required fields are marked *