Menu

ಭಾರೀ ಮಳೆ ಸಾಧ್ಯತೆ: ರಾಜ್ಯದ ಕರಾವಳಿಯಲ್ಲಿ ಕಡಲಿಗಿಳಿಯದಂತೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ ಕೆಲವು ದಿನ ಭಾರೀ ಮಳೆಯಾಗಲಿದ್ದು, ಜೂನ್ 30ರಿಂದ ಜುಲೈ 6ರವರೆಗೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಮಳೆಯೊಂದಿಗೆ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಹಲವೆಡೆ ವಾಹನ ಸಂಚಾರ ಸಮಸ್ಯೆಯಾಗಿದೆ, ಜನಜೀವನ ದುಸ್ತರಗೊಂಡಿದೆ.

ಐಎಂಡಿ ಮುನ್ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯವಿಲ್ಲದೆ ಮನೆಯಿಂದ ಹೊರಬರದಂತೆ ಜಿಲ್ಲಾಡಳಿತವು ಮನವಿ ಮಾಡಿದೆ. ಮಕ್ಕಳು, ಕಾರ್ಮಿಕರು ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕು. ಗುಡುಗು-ಮಿಂಚು ಮಳೆ ಸಮಯದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

ಪ್ರವಾಸಿಗರು, ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರ, ನದಿಗಳು, ಕೆರೆಗಳು ಮತ್ತು ಜಲಾಶಯಗಳಿಗೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ನಿರಂತರ ಮಳೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯವೂ ಹೆಚ್ಚಿರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *