ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಪರಾರಿಯಾಗಿದ್ದು, ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಲ್ಲದೆ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಕುರಿಗಳನ್ನು ಹೊತ್ತೊಯ್ದಿದ್ದಾರೆ.
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಯುವಕನ ಕುಟುಂಬವು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ರಕ್ಷಣೆ ಕೋರಿದೆ. ಎರಡು ದಿನಗಳ ಹಿಂದೆ ಗ್ರಾಮದ ನಾಗವ್ವ ಎಂಬ ವಿವಾಹಿತ ಮಹಿಳೆಯೊಂದಿಗೆ ಯಲ್ಲಪ್ಪ ನಾಯಕ ಎಂಬ ಯುವಕ ಪರಾರಿಯಾಗಿದ್ದಾನೆ. ನಾಗವ್ವ ಕಳೆದ ವರ್ಷ ಬಸಪ್ಪ ನಾಯಕ ಎಂಬಾತನನ್ನು ಮದುವೆಯಾಗಿದ್ದಳು. ಬಸಪ್ಪ ನಾಯಕ ಮತ್ತು ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರಾಗಿದ್ದು, ಮೂವರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ನಾಗವ್ವನ ಜೊತೆ ಯುವಕ ಪರಾರಿಯಾಗಿರುವುದಕ್ಕೆ ಸಿಟ್ಟಿಗೆದ್ದ ಆಕೆಯ ಕುಟುಂಬವು ಮಾರಕಾಸ್ತ್ರಗಳೊಂದಿಗೆ ಯಲ್ಲಪ್ಪನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಮನೆಯ ಹೆಂಚುಗಳನ್ನು ಒಡೆದು ಹಾಕಿದ್ದಾರೆ. ಗೃಹೋಪಯೋಗಿ ವಸ್ತುಗಳನ್ನು ಪುಡಿಗೈದಿದ್ದಾರೆ.
ಮನೆ ಧ್ವಂಸ ಮಾಡಿದ್ದಲ್ಲದೆ ಚಿನ್ನಾಭರಣಗಳು, ನಗದು ಹಣ ಮತ್ತು 25 ಕುರಿಗಳನ್ನು ದೋಚಿಕೊಂಡು ಪರಾರಿಯಾಗಿರುವುದಾಗಿ ಯುವಕನ ಕುಟುಂಬ ದೂರಿನಲ್ಲಿ ಆರೋಪಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


