ಮೈಸೂರಿನ ಕುವೆಂಪುನಗರ ಪ್ರದೇಶದಲ್ಲಿ ಭಾನುವಾರ ರಾತ್ರಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ವ್ಯಕ್ತಿ ಮೃತಪಟ್ಟಿರುವ ಪ್ರಕರಣದ ತನಿಖೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ವಿಚಾರ ಬಯಲಾಗಿದೆ.
50 ವರ್ಷದ ನಿತ್ಯಾನಂದ ಕೊಲೆಯಾದ ವ್ಯಕ್ತಿ. ಶಿಕ್ಷಕಿ ಸುಶೀಲಾ ಕೊಲೆಗೈದ ಪತ್ನಿ. ನಿತ್ಯಾನಂದ ಕಾರು ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದು, ಸುಶೀಲಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಇವರಿಗೆ ಮದುವೆಯಾಗಿ 15 ವರ್ಷವಾಗಿದ್ದು, ಮಕ್ಕಳಿಲ್ಲ.
ಕುಡಿದು ಮನೆಗೆ ಬಂದಿದ್ದ ನಿತ್ಯಾನಂದ ನಿದ್ದೆ ಮಾಡುತ್ತಿದ್ದಾಗ ಪತ್ನಿಯು ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಳು. ನಿತ್ಯಾನಂದನಿಗೆ ಹೃದಯಾಘಾತವಾಗಿದೆ ಎಂದು ಆತನ ಸಹೋದರನಿಗೆ ತಿಳಿಸಿದ್ದಳು, ಅಂತ್ಯಕ್ರಿಯೆಗಾಗಿ ಮನೆಗೆ ಬಂದ ಸಹೋದರ ನಿತ್ಯಾನಂದನ ಕುತ್ತಿಗೆಯಲ್ಲಿ ಗಾಯವನ್ನು ಗಮನಿಸಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಸುಶೀಲಾ ಅಪರಾಧ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಮಕ್ಕಳಿಲ್ಲದ ಕಾರಣ ಉಂಟಾಗುತ್ತಿದ್ದ ಕುಟುಂಬ ಕಲಹ ಮತ್ತು ಹಣಕಾಸಿನ ಉದ್ವಿಗ್ನತೆ ಕೊಲೆಗೆ ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಿಗ್ಗೆ ನಿತ್ಯಾನಂದನ ಸ್ನೇಹಿತ ದರ್ಶನ್ ಬಾಗಿಲು ಬಡಿದರೂ ಸುಶೀಲಾ ಬಹಳ ಸಮಯದವರೆಗೆ ಬಾಗಿಲು ತೆರೆಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದರ್ಶನ್ ಫೋನ್ ಕರೆಗಳಿಗೆ ನಿತ್ಯಾನಂದ ಉತ್ತರಿಸದ ಕಾರಣ ದರ್ಶನ್ ಅವರನ್ನು ಹುಡುಕಲು ಬಂದಿದ್ದರು. ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಘಟನೆಯ ತನಿಖೆ ಮುಂದುವರಿಸಿದ್ದಾರೆ.


